ಕಡಲ ಸಹಕಾರ ಬಲವರ್ಧನೆಗೆ ಭಾರತ–ದಕ್ಷಿಣ ಕೊರಿಯಾ ಕರಾವಳಿ ಕಾವಲು ಪಡೆಗಳ ಸಭೆ

ಇಂಚಿಯಾನ್: ಕಡಲ ಭದ್ರತೆ ಮತ್ತು ಕಾರ್ಯಾಚರಣೆಯ ಸಮನ್ವಯವನ್ನು ಬಲಪಡಿಸುವ ಉದ್ದೇಶದಿಂದ ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಮತ್ತು ದಕ್ಷಿಣ ಕೊರಿಯಾದ ಕರಾವಳಿ ಕಾವಲು ಪಡೆ (ಕೆಸಿಜಿ) 14ನೇ ಉನ್ನತ ಮಟ್ಟದ ಸಭೆಯನ್ನು ಅಕ್ಟೋಬರ್ 14ರಂದು ಇಂಚಿಯಾನ್‌ನಲ್ಲಿ ನಡೆಸಿದವು.

ದ್ವಿಪಕ್ಷೀಯ ಕಡಲ ಸಹಕಾರವನ್ನು ಮತ್ತಷ್ಟು ಬಲಪಡಿಸುವುದು ಮತ್ತು ಎರಡೂ ಸಂಸ್ಥೆಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ವಿಸ್ತರಿಸುವುದು ಸಭೆಯ ಪ್ರಮುಖ ಉದ್ದೇಶವಾಗಿತ್ತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಸಭೆಯಲ್ಲಿ ಕಡಲ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು, ಸಮುದ್ರ ಮಾಲಿನ್ಯ ನಿಯಂತ್ರಣ, ಕಡಲ ಕಾನೂನು ಜಾರಿ, ಸಾಮರ್ಥ್ಯ ವೃದ್ಧಿ ಹಾಗೂ ಕಾರ್ಯಾಚರಣೆಯ ಸಮನ್ವಯ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಯಿತು. ಅಸ್ತಿತ್ವದಲ್ಲಿರುವ ಸಹಕಾರ ವ್ಯವಸ್ಥೆಗಳನ್ನು ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಸಹಯೋಗ ಹೆಚ್ಚಿಸುವ ಮಾರ್ಗಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು.

ಎರಡೂ ದೇಶಗಳ ಕರಾವಳಿ ಕಾವಲು ಪಡೆಗಳು ಈಗಾಗಲೇ ಮಾಡಿಕೊಂಡಿರುವ ತಿಳಿವಳಿಕೆ ಒಪ್ಪಂದಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದವು. ವೃತ್ತಿಪರ ವಿನಿಮಯ, ಜಂಟಿ ತರಬೇತಿ ಅಭ್ಯಾಸಗಳು, ದ್ವಿಪಕ್ಷೀಯ ಹಡಗು ಭೇಟಿಗಳು ಹಾಗೂ ತ್ವರಿತ ಮಾಹಿತಿ ಹಂಚಿಕೆಯನ್ನು ಬಲಪಡಿಸಲು ಒಪ್ಪಿಕೊಂಡವು.

ಕಡಲ ಭದ್ರತೆಗೆ ಸಂಬಂಧಿಸಿದ ಸಾಮಾನ್ಯ ಸವಾಲುಗಳನ್ನು ಎದುರಿಸಲು ಎರಡೂ ಪಡೆಗಳ ನಡುವಿನ ಸಮನ್ವಯ ಮತ್ತು ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯವನ್ನು ಸಭೆ ಒತ್ತಿಹೇಳಿತು. ಸುರಕ್ಷಿತ ಹಾಗೂ ಪರಿಸರ ಸ್ನೇಹಿ ಕಡಲ ವಲಯವನ್ನು ರೂಪಿಸುವ ನಿಟ್ಟಿನಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುವ ಬದ್ಧತೆಯನ್ನೂ ಪುನರುಚ್ಚರಿಸಲಾಯಿತು.

ಭಾರತೀಯ ನಿಯೋಗದ ನೇತೃತ್ವವನ್ನು ಇನ್ಸ್‌ಪೆಕ್ಟರ್ ಜನರಲ್ ಟಿ. ಶಶಿ ಕುಮಾರ್ ವಹಿಸಿದ್ದರು. ದಕ್ಷಿಣ ಕೊರಿಯಾದ ನಿಯೋಗಕ್ಕೆ ಹಿರಿಯ ಸೂಪರಿಂಟೆಂಡೆಂಟ್ ಜನರಲ್ ಇಮ್ ಮಿಯಾಂಗ್ ಗಿಲ್ ನೇತೃತ್ವ ನೀಡಿದ್ದರು.

Related posts