ತಿರಂಗಾ ಯಾತ್ರೆಗೆ ಪೊಲೀಸ್ ತಡೆ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆಗೆ ನೋಟಿಸ್

ನವದೆಹಲಿ: ರಾಷ್ಟ್ರ ರಾಜಧಾನಿಯ ಕನ್ನಾಟ್ ಪ್ಲೇಸ್‌ನಲ್ಲಿ ತಿರಂಗಾ ಯಾತ್ರೆ ನಡೆಸಲು ಸಜ್ಜಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸದಂತೆ ಸೂಚಿಸಿದ್ದು, ಯಾತ್ರೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಶುಕ್ರವಾರ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಂಗಿದ್ದ ಎನ್‌ಸಿಪಿ-ಎಸ್‌ಸಿಪಿ ವಕ್ತಾರ ಅನೀಶ್ ಗವಾಂಡೆ ಅವರ ನಿವಾಸಕ್ಕೆ 20ಕ್ಕೂ ಹೆಚ್ಚು ಪೊಲೀಸರು ಆಗಮಿಸಿ ನೋಟಿಸ್ ನೀಡಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಮೆರವಣಿಗೆಗೆ ನವದೆಹಲಿ ಪುರಸಭೆ ಮಂಡಳಿ (ಎನ್‌ಡಿಎಂಸಿ) ಅನುಮತಿ ನೀಡಿಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ನಿರ್ಬಂಧಗಳ ನಡುವೆಯೂ ಯಾತ್ರೆ ಮುಂದುವರಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಅನೀಶ್ ಗವಾಂಡೆ, “ನಾನು ಹೊರಗೆ ಹೋಗಿ ವಾಪಸ್ ಬಂದಾಗ ನನ್ನ ನಿವಾಸಕ್ಕೆ ಪೊಲೀಸರು ಬಂದಿರುವುದು ತಿಳಿಯಿತು. ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ನಮ್ಮ ಅತಿಥಿಯಾಗಿದ್ದಾರೆ. ಮೊದಲು ನೋಟಿಸ್ ಓದಿಕೊಳ್ಳುತ್ತೇವೆ. ನಾವೆಲ್ಲರೂ ತಿರಂಗಾ ಯಾತ್ರೆಯಲ್ಲಿ ಭಾಗವಹಿಸುತ್ತೇವೆ” ಎಂದು ಹೇಳಿದರು.

ಯಾತ್ರೆಯಲ್ಲಿ ಪಾಲ್ಗೊಳ್ಳಲು ಪೊಲೀಸರು ಅವಕಾಶ ನೀಡದಿದ್ದರೆ ಅದು ಸರ್ಕಾರದ ಹೇಡಿತನವನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು. “ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಮಾತನಾಡುವವರು ತ್ರಿವರ್ಣ ಧ್ವಜಕ್ಕೆ ಹೆದರಬಾರದು” ಎಂದು ಗವಾಂಡೆ ಹೇಳಿದರು.
ನಿಗದಿತ ಯಾತ್ರೆಗೆ ಪೊಲೀಸರು ತಡೆ ಒಡ್ಡಿರುವ ಹಿನ್ನೆಲೆಯಲ್ಲಿ ಕನ್ನಾಟ್ ಪ್ಲೇಸ್‌ನಲ್ಲಿ ಪ್ರತಿಭಟನೆಯ ಸುತ್ತ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ.

Related posts