ಬೆಂಗಳೂರು: ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳ ಸರಬರಾಜು ನಡೆಯುತ್ತಿರುವುದು ಹಾಗೂ ಭಯೋತ್ಪಾದಕರ ಸ್ಲೀಪರ್ ಸೆಲ್ಗಳು ಮತ್ತು ಅವರಿಗೆ ಬೆಂಬಲ ನೀಡುವ ವ್ಯಕ್ತಿಗಳು ಪತ್ತೆಯಾಗುತ್ತಿರುವುದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ ಎಂದು ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಗೃಹ ಸಚಿವರ ತವರು ಜಿಲ್ಲೆ ಕಲಬುರಗಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಪರ್ಕ ಹೊಂದಿರುವ ದೇಶದ್ರೋಹಿಗಳು ಇದ್ದಾರೆ ಎಂಬ ವಿಚಾರವನ್ನು ಲಘುವಾಗಿ ತೆಗೆದುಕೊಳ್ಳಬಾರದು. ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳಿಗೆ ಯಾರೂ ಸಹಾನುಭೂತಿ ತೋರಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ.

ಭಯೋತ್ಪಾದಕರಿಗೆ ಬೆಂಬಲವಾಗಿ ನಿಲ್ಲುವವರು ಯಾರು, ಅವರಿಗೆ ಹಣಕಾಸಿನ ನೆರವು ನೀಡುವವರು ಯಾರು ಹಾಗೂ ಅವರೊಂದಿಗೆ ಸಂಪರ್ಕ ಹೊಂದಿರುವವರು ಯಾರು ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಿ.ಟಿ.ರವಿ ಒತ್ತಾಯಿಸಿದ್ದಾರೆ.
ಭಯೋತ್ಪಾದಕರಿಗೆ ನೆರವು ನೀಡುವ ಚಟುವಟಿಕೆಗಳಲ್ಲಿ ಬೇರೆ ಯಾವುದೇ ಸಂಘಟನೆಗಳು ತೊಡಗಿಕೊಂಡಿವೆಯೇ ಎಂಬುದನ್ನೂ ತನಿಖೆಯ ಮೂಲಕ ಪತ್ತೆಹಚ್ಚಬೇಕು. ಇಂತಹ ಚಟುವಟಿಕೆಗಳ ಹಿಂದಿರುವ ಜಾಲವನ್ನು ಸಂಪೂರ್ಣವಾಗಿ ಬಹಿರಂಗಪಡಿಸಿ, ಭಯೋತ್ಪಾದನೆಯನ್ನು ಬೇರುಮಟ್ಟದಿಂದ ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

