ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧ ಶೀಘ್ರದಲ್ಲೇ ಅಂತ್ಯಗೊಳ್ಳುವ ನಿರೀಕ್ಷೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಸಂಘರ್ಷ ಮುಕ್ತಾಯಗೊಂಡ ಬಳಿಕ ಜಾಗತಿಕ ತೈಲ ಬೆಲೆಗಳು ಭಾರಿ ಪ್ರಮಾಣದಲ್ಲಿ ಕುಸಿಯಲಿವೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಆದರೆ, ಯುದ್ಧವನ್ನು ಯಾವಾಗ ಮತ್ತು ಯಾವ ರೀತಿಯಲ್ಲಿ ಅಂತ್ಯಗೊಳಿಸಲಾಗುತ್ತದೆ ಎಂಬ ಬಗ್ಗೆ ಅವರು ಸ್ಪಷ್ಟ ಕಾಲಮಿತಿಯನ್ನು ನೀಡಿಲ್ಲ.
ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರೊಂದಿಗೆ ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ತಡೆಯುವುದು ಅಮೆರಿಕದ ಪ್ರಮುಖ ಗುರಿಯಾಗಿದೆ ಎಂದು ಹೇಳಿದ್ದಾರೆ. ಇರಾನ್ನ ಪರಮಾಣು ಸಾಮರ್ಥ್ಯವನ್ನು ನಾಶಪಡಿಸಿರುವುದಾಗಿ ಪ್ರತಿಪಾದಿಸಿದ ಅವರು, ಐದು, ಆರು ಅಥವಾ ಹತ್ತು ವರ್ಷಗಳ ಬಳಿಕವೂ ಆ ಸಾಮರ್ಥ್ಯವನ್ನು ಮರುಸ್ಥಾಪಿಸಲು ಸಾಧ್ಯವಾಗದಂತೆ ಕ್ರಮ ಕೈಗೊಳ್ಳುವುದು ಅಗತ್ಯ ಎಂದಿದ್ದಾರೆ.

ಯುದ್ಧದಿಂದಾಗಿ ಇಂಧನ ಬೆಲೆಗಳು ಏರಿಕೆಯಾಗಿರುವುದನ್ನು ಸಮರ್ಥಿಸಿಕೊಂಡ ಟ್ರಂಪ್, ಇರಾನ್ನ ಪರಮಾಣು ಬೆದರಿಕೆಯನ್ನು ತಡೆಯಲು ಪೆಟ್ರೋಲ್ ಬೆಲೆ ಏರಿಕೆ ಪಾವತಿಸಬೇಕಾದ ಸಣ್ಣ ಬೆಲೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ಕಾರ್ಯಾಚರಣೆಯಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದ ಅವರು, ಸಂಘರ್ಷವನ್ನು ಹೇಗೆ ಅಂತ್ಯಗೊಳಿಸಬೇಕು ಎಂಬ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ ಎಂದು ತಿಳಿಸಿದ್ದಾರೆ.
ಇರಾನ್ ವಿರುದ್ಧದ ಸಂಘರ್ಷದಲ್ಲಿ ನೆರವು ನೀಡುವಂತೆ ಕೆಲವು ಯುರೋಪ್ ರಾಷ್ಟ್ರಗಳನ್ನು ಕೇಳಿಕೊಂಡರೂ ಅವು ನಿರಾಕರಿಸಿವೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಯುರೋಪ್ ನಾಯಕರ ಪ್ರತಿಕ್ರಿಯೆ ತಿಳಿದುಕೊಳ್ಳಲು ವೈಯಕ್ತಿಕವಾಗಿ ದೂರವಾಣಿ ಕರೆ ಮಾಡಿದ್ದಾಗಿ ಹೇಳಿದ ಅವರು, ನ್ಯಾಟೋ ಮೈತ್ರಿಕೂಟಕ್ಕಾಗಿ ಅಮೆರಿಕ ನೂರಾರು ಶತಕೋಟಿ ಡಾಲರ್ ವೆಚ್ಚ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ನೆರವು ನಿರಾಕರಿಸಿದ ನಾಯಕರ ಹೆಸರು ಅಥವಾ ಕೇಳಿದ್ದ ನೆರವಿನ ಸ್ವರೂಪವನ್ನು ಅವರು ಬಹಿರಂಗಪಡಿಸಿಲ್ಲ.

