ಕಲಬುರಗಿ: ವಿರೋಧ ಪಕ್ಷದ ನಾಯಕರು ಎತ್ತಿರುವ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುವ ಬದಲು, ಇತರರ ಮೂಲಕ ಪ್ರತಿಕ್ರಿಯೆ ನೀಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಅವರು ತಮ್ಮನ್ನು ಕಾನೂನು ಮತ್ತು ಸಂವಿಧಾನಕ್ಕಿಂತ ಮೇಲಿನವರೆಂದು ಭಾವಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಉಲ್ಲೇಖಿಸಿದ ಖರ್ಗೆ, ವಿರೋಧ ಪಕ್ಷಗಳ ಕಳವಳಗಳಿಗೆ ಪ್ರಧಾನಿ ಸ್ವತಃ ಉತ್ತರಿಸುವ ಬದಲು ಇತರರನ್ನು ಮುಂಚೂಣಿಗೆ ತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಲಬುರಗಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ನಾವು ಅವರಿಗೆ ಪತ್ರ ಬರೆದರೆ, ಅವರು ಬೇರೆಯವರ ಕೈಯಲ್ಲಿ ಉತ್ತರ ಬರೆಸುತ್ತಾರೆ. ಇದರ ಅರ್ಥವೇನು? ಎಂದು ಪ್ರಶ್ನಿಸಿದರು. ಈ ರೀತಿಯ ನಡೆ ವಿರೋಧ ಪಕ್ಷಗಳ ನಾಯಕರು ಮತ್ತು ರಾಜಕೀಯ ಪಕ್ಷಗಳಿಗೆ ಅವಮಾನ ಮಾಡಿದಂತಾಗಿದೆ ಎಂದು ಟೀಕಿಸಿದರು.
ವಿರೋಧ ಪಕ್ಷಗಳು ಪ್ರಸ್ತಾಪಿಸುವ ವಿಷಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅವುಗಳಿಗೆ ನೇರವಾಗಿ ಪ್ರತಿಕ್ರಿಯಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು 543 ಲೋಕಸಭಾ ಸದಸ್ಯರಲ್ಲಿ ಒಬ್ಬರಾಗಿದ್ದು, ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಆದರೆ, ಆ ಸ್ಥಾನದಲ್ಲಿದ್ದಾರೆ ಎಂಬ ಕಾರಣಕ್ಕೆ ತಮಗೆ ಇಷ್ಟ ಬಂದಂತೆ ವರ್ತಿಸಲು ಸಾಧ್ಯವಿಲ್ಲ ಎಂದು ಖರ್ಗೆ ಹೇಳಿದರು.

