ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ: ವಿಶ್ವಸಂಸ್ಥೆ ವರದಿಗೆ ಭಾರತದ ಆಕ್ಷೇಪ

ನ್ಯೂಯಾರ್ಕ್: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಅಪರಾಧ ಜಾಲವಾದ ‘ಡಿ-ಕಂಪನಿ’ಯನ್ನು ‘ಭಾರತ ಮೂಲದ’ ಸಂಘಟನೆ ಎಂದು ಉಲ್ಲೇಖಿಸಿರುವ ವಿಶ್ವಸಂಸ್ಥೆಯ ವಿಶೇಷ ವರದಿಗಾರ ಬೆನ್ ಸಾಲ್ ಅವರ ವರದಿಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವರದಿಯಲ್ಲಿ ವಾಸ್ತವಾಂಶಗಳನ್ನು ಸರಿಯಾಗಿ ಪ್ರಸ್ತುತಪಡಿಸಬೇಕು ಮತ್ತು ನಿಷ್ಪಕ್ಷಪಾತ ಹಾಗೂ ವಸ್ತುನಿಷ್ಠ ಮಾನದಂಡಗಳನ್ನು ಪಾಲಿಸಬೇಕು ಎಂದು ಭಾರತ ಆಗ್ರಹಿಸಿದೆ.

ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಮಾತನಾಡಿದ ಭಾರತೀಯ ರಾಜತಾಂತ್ರಿಕ ಅಧಿಕಾರಿ ರಘು ಪುರಿ, ವಿಶೇಷ ವರದಿಗಾರರು ತಪ್ಪು ಮಾಹಿತಿಯೊಂದಿಗೆ ವರದಿ ಬಿಡುಗಡೆ ಮಾಡುವುದು ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ. ವಾಸ್ತವಾಂಶಗಳಲ್ಲಿ ತಪ್ಪುಗಳಿದ್ದರೂ ವರದಿಗಾರರ ಹೊಣೆಗಾರಿಕೆಯನ್ನು ನಿಗದಿಪಡಿಸದಿರುವುದು ಸ್ವೀಕಾರಾರ್ಹವಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಾವೂದ್ ಪಾಕಿಸ್ತಾನದಲ್ಲಿದ್ದಾನೆ

ದಾವೂದ್ ಇಬ್ರಾಹಿಂ ಭಾರತಕ್ಕೆ ಬೇಕಾಗಿರುವ ಅಪರಾಧಿಯಾಗಿದ್ದು, ಆತ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎಂದು ಭಾರತ ಪುನರುಚ್ಚರಿಸಿದೆ. ಒಸಾಮಾ ಬಿನ್ ಲಾಡೆನ್ ಪತ್ತೆಯಾಗಿ ಹತ್ಯೆಗೀಡಾದ ದೇಶವೂ ಪಾಕಿಸ್ತಾನವೇ ಎಂದು ಪುರಿ ಉಲ್ಲೇಖಿಸಿದ್ದಾರೆ.

ಡಿ-ಕಂಪನಿ ಮತ್ತು ಅದರ ನಾಯಕ ದಾವೂದ್ ಇಬ್ರಾಹಿಂ 1993ರಿಂದ ಭಾರತದಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ಭಾರತದ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದಾರೆ. 2003ರಲ್ಲಿ ಅಲ್‌ಖೈದಾ ಜೊತೆಗಿನ ಸಂಬಂಧದ ಹಿನ್ನೆಲೆಯಲ್ಲಿ ದಾವೂದ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಗಳ ಪಟ್ಟಿಗೆ ಸೇರಿಸಲಾಗಿತ್ತು. ಈ ಹಿನ್ನೆಲೆಯನ್ನು ವರದಿಯಲ್ಲಿ ಸಮರ್ಪಕವಾಗಿ ಉಲ್ಲೇಖಿಸದಿರುವುದು ತಪ್ಪು ಚಿತ್ರಣಕ್ಕೆ ಕಾರಣವಾಗುತ್ತದೆ ಎಂದು ಭಾರತ ಆಕ್ಷೇಪಿಸಿದೆ.

ಭಯೋತ್ಪಾದನೆಗೆ ಸಮರ್ಥನೆ ಸಲ್ಲದು

ಮಾನವ ಹಕ್ಕುಗಳು ಮತ್ತು ಭಯೋತ್ಪಾದನೆ ನಿಗ್ರಹದ ಚೌಕಟ್ಟನ್ನು ಭಯೋತ್ಪಾದಕರನ್ನು ಸಮರ್ಥಿಸಿಕೊಳ್ಳಲು ಬಳಸಬಾರದು ಎಂದು ಭಾರತ ಹೇಳಿದೆ. ಮಾನವ ಹಕ್ಕುಗಳ ಹೆಸರಿನಲ್ಲಿ ಮೂಲಭೂತವಾದ ಮತ್ತು ಉಗ್ರವಾದಕ್ಕೆ ಆಶ್ರಯ ನೀಡಲು ಸಾಧ್ಯವಿಲ್ಲ. ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ ಎಂದು ಪುರಿ ಹೇಳಿದ್ದಾರೆ.

ಇದೇ ವೇಳೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕುರಿತು ಪಾಕಿಸ್ತಾನದ ಪ್ರತಿನಿಧಿ ಮಾಡಿರುವ ಹೇಳಿಕೆಗಳಿಗೂ ಭಾರತ ತಿರುಗೇಟು ನೀಡಿದೆ. ಪಾಕಿಸ್ತಾನದ ಹೇಳಿಕೆಗಳು ರಾಜಕೀಯ ಲಾಭಕ್ಕಾಗಿ ನಡೆಸುತ್ತಿರುವ ಪ್ರಚಾರ ಎಂದು ಟೀಕಿಸಿದ ಭಾರತ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಭಾರತದ ಅವಿಭಾಜ್ಯ ಅಂಗಗಳಾಗಿವೆ ಎಂದು ಪುನರುಚ್ಚರಿಸಿದೆ.

ಇದಕ್ಕೂ ಮುನ್ನ, ಮಾನವ ಹಕ್ಕುಗಳನ್ನು ರಾಜಕೀಯ ಒತ್ತಡ ಹೇರುವ ಅಥವಾ ಆಯ್ದ ದೇಶಗಳನ್ನು ಗುರಿಯಾಗಿಸುವ ಸಾಧನವಾಗಿ ಬಳಸಬಾರದು ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಪ್ರತಿಪಾದಿಸಿತ್ತು.

Related posts