ನವದೆಹಲಿ: ಭಾರತೀಯ ರೈಲ್ವೆ ಅಕ್ಟೋಬರ್ 1ರಿಂದ 18ರವರೆಗೆ ಕಲ್ಲಿದ್ದಲು ಸಾಗಣೆಯಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.22.5ರಷ್ಟು ಬೆಳವಣಿಗೆ ದಾಖಲಿಸಿದೆ. ಉಷ್ಣ ವಿದ್ಯುತ್ ಸ್ಥಾವರಗಳಿಗೆ ನಿರಂತರ ಇಂಧನ ಪೂರೈಕೆ ಖಚಿತಪಡಿಸುವ ಪ್ರಯತ್ನದ ಭಾಗವಾಗಿ, ಕಲ್ಲಿದ್ದಲು ಸಾಗಣೆ ದಿನಕ್ಕೆ 87 ರೇಕ್ಗಳಷ್ಟು ಹೆಚ್ಚಾಗಿದೆ.
2026-27ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಪ್ರತಿದಿನ ಸರಾಸರಿ 430 ಕಲ್ಲಿದ್ದಲು ರೇಕ್ಗಳನ್ನು ರೈಲ್ವೆ ರವಾನಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಗಿಂತ ಶೇ.7.1ರಷ್ಟು ಹೆಚ್ಚಳವಾಗಿದೆ. ಸೆಪ್ಟೆಂಬರ್ನಲ್ಲಿಯೂ ಕಲ್ಲಿದ್ದಲು ರೇಕ್ಗಳ ದೈನಂದಿನ ಸಾಗಣೆ ವರ್ಷದಿಂದ ವರ್ಷಕ್ಕೆ ಶೇ.14ರಷ್ಟು ಏರಿಕೆಯಾಗಿದೆ.

ಕೆಲವು ಪ್ರದೇಶಗಳಲ್ಲಿ ಕೈಗಾರಿಕಾ ಚಟುವಟಿಕೆ ಹೆಚ್ಚಳ ಮತ್ತು ಮಳೆಯ ಕೊರತೆಯಿಂದ ವಿದ್ಯುತ್ ಬೇಡಿಕೆ ಏರಿಕೆಯಾಗಿರುವುದು ಕಲ್ಲಿದ್ದಲು ಸಾಗಣೆಯ ಹೆಚ್ಚಳಕ್ಕೆ ಕಾರಣವಾಗಿದೆ. ನಿರಂತರ ಸಾಗಣೆಯಿಂದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ನಿರ್ವಹಿಸಲು ಹಾಗೂ ವಿದ್ಯುತ್ ಉತ್ಪಾದನೆಗೆ ಬೆಂಬಲ ನೀಡಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

