ವಾಷಿಂಗ್ಟನ್: ಅಮೆರಿಕದೊಂದಿಗೆ ಇರಾನ್ ಶಾಂತಿ ಒಪ್ಪಂದಕ್ಕೆ ಬರದಿದ್ದರೆ ಮತ್ತೊಂದು ಸುತ್ತಿನ ಭೀಕರ ವೈಮಾನಿಕ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇರಾನ್ ವಿರುದ್ಧದ ಕಾರ್ಯಾಚರಣೆ ಬಳಿಕ ಕ್ಯೂಬಾದತ್ತಲೂ ಗಮನ ಹರಿಸುವುದಾಗಿ ಹೇಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಆತಂಕಕ್ಕೆ ಕಾರಣರಾಗಿದ್ದಾರೆ.
ಫ್ಲೋರಿಡಾದಲ್ಲಿ ನಡೆದ ಮಧ್ಯಂತರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಟ್ರಂಪ್, ಇರಾನ್ ಮಾತುಕತೆಗೆ ಒಪ್ಪದಿದ್ದರೆ ಮತ್ತೊಂದು ಸೇನಾ ಕಾರ್ಯಾಚರಣೆ ಅನಿವಾರ್ಯವಾಗಬಹುದು ಎಂದು ಹೇಳಿದ್ದಾರೆ.

‘ಆಪರೇಷನ್ ಎಪಿಕ್ ಫ್ಯೂರಿ’ ಮತ್ತೆ?
“ಇರಾನ್ ನಮ್ಮೊಂದಿಗೆ ಶಾಂತಿ ಮಾತುಕತೆಗೆ ಒಪ್ಪದಿದ್ದರೆ ಮತ್ತೊಂದು ಪುಟ್ಟ ‘ಎಪಿಕ್ ಫ್ಯೂರಿ’ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಅವರಿಗೆ ಬುದ್ಧಿಯಿದ್ದರೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಬರುತ್ತಾರೆ. ಆದರೆ ಅವರು ಅಷ್ಟು ಬುದ್ಧಿವಂತರು ಎಂದು ನನಗನಿಸುವುದಿಲ್ಲ” ಎಂದು ಟ್ರಂಪ್ ವ್ಯಂಗ್ಯವಾಡಿದ್ದಾರೆ.
ಇರಾನ್ ವಿರುದ್ಧ ಅಮೆರಿಕ ಈ ಹಿಂದೆ ನಡೆಸಿದ್ದ ಬೃಹತ್ ಸೇನಾ ಕಾರ್ಯಾಚರಣೆಗೆ ‘ಆಪರೇಷನ್ ಎಪಿಕ್ ಫ್ಯೂರಿ’ ಎಂದು ಹೆಸರಿಡಲಾಗಿತ್ತು. ಇದೀಗ ಟ್ರಂಪ್ ಅವರ ಹೊಸ ಎಚ್ಚರಿಕೆ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚುವ ಸಾಧ್ಯತೆಯನ್ನು ಸೂಚಿಸಿದೆ.
ತೈಲ ಬೆಲೆ ಏರಿಕೆಗೆ ಉಕ್ರೇನ್ ಕಾರಣ ಎಂದ ಟ್ರಂಪ್
ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ಕುರಿತು ಪ್ರತಿಕ್ರಿಯಿಸಿದ ಟ್ರಂಪ್, ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲೆ ಉಕ್ರೇನ್ ನಡೆಸುತ್ತಿರುವ ದಾಳಿಗಳೇ ಇಂಧನ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಇರಾನ್ ಸಂಘರ್ಷದಿಂದ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ನಡುವೆಯೇ ಅವರ ಈ ಹೇಳಿಕೆ ಬಂದಿದೆ.
ಕ್ಯೂಬಾ ಮೇಲೂ ಟ್ರಂಪ್ ಕಣ್ಣು
ಇರಾನ್ನಿಂದ ವಾಪಸಾಗುವ ಅಮೆರಿಕದ ಯುದ್ಧನೌಕೆಗಳು ಕ್ಯೂಬಾದ ಕರಾವಳಿ ಸಮೀಪ ನಿಲ್ಲಿಸಿದರೆ ಆ ದೇಶ ಶರಣಾಗಬಹುದು ಎಂದು ಟ್ರಂಪ್ ಹೇಳಿದ್ದಾರೆ.
“ನಮ್ಮ ಯುದ್ಧನೌಕೆಗಳು ಕ್ಯೂಬಾದ ಕರಾವಳಿಯಿಂದ ಸುಮಾರು 50 ಗಜ ದೂರದಲ್ಲಿ ನಿಂತರೆ ಸಾಕು. ಅವರು ಶರಣಾಗುತ್ತಾರೆ. ಬಳಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಒಳಗೆ ಕಳುಹಿಸಿ ದೇಶವನ್ನು ಸರಿಪಡಿಸುತ್ತೇವೆ” ಎಂದು ಟ್ರಂಪ್ ಹೇಳಿದ್ದಾರೆ.
ಕ್ಯೂಬಾ ತಿರುಗೇಟು
ಟ್ರಂಪ್ ಹೇಳಿಕೆಗೆ ಕ್ಯೂಬಾದ ವಿದೇಶಾಂಗ ಸಚಿವ ಬ್ರೂನೋ ರೊಡ್ರಿಗಸ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕ್ಯೂಬಾದ ಕಡಲತೀರಗಳು ಕೇವಲ ಸುಂದರವಾಗಿಲ್ಲ, ಅಲ್ಲಿ ರೇಜರ್ನಂತೆ ಹರಿತವಾದ ಸುಣ್ಣದ ಕಲ್ಲಿನ ಮುಳ್ಳುಗಳೂ ಇವೆ. ದಬ್ಬಾಳಿಕೆ ಮತ್ತು ಪ್ರಾಬಲ್ಯ ಮೆರೆಯುವ ಉದ್ದೇಶದಿಂದ ಬರುವವರಿಗೆ ನಮ್ಮ ತೀರಗಳು ನರಕವಾಗಲಿವೆ ಎಂದು ಎಚ್ಚರಿಸಿದ್ದಾರೆ.
ಕ್ಯೂಬಾದ ಕಮ್ಯುನಿಸ್ಟ್ ಆಡಳಿತವನ್ನು ಬದಲಾಯಿಸಲು ಅಮೆರಿಕ ದೀರ್ಘಕಾಲದಿಂದ ಒತ್ತಡ ಹೇರುತ್ತಿದೆ. ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳು ಉಭಯ ದೇಶಗಳ ನಡುವಿನ ಸಂಘರ್ಷದ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.
ಜಾಗತಿಕ ತೈಲ ಮಾರುಕಟ್ಟೆಗೆ ಆತಂಕ
ಟರ್ಕಿಯಲ್ಲಿರುವ ಅಮೆರಿಕದ ರಾಯಭಾರಿ ಟಾಮ್ ಬರಾಕ್ ಅವರು ವಾರಾಂತ್ಯದಲ್ಲಿ ಇರಾನ್ ಮೇಲೆ ಮತ್ತೆ ದಾಳಿ ನಡೆಯುವ ಸಾಧ್ಯತೆಯ ಸುಳಿವು ನೀಡಿದ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಯಾವುದೇ ಪ್ರಚೋದನೆಗೆ ಪ್ರತಿಯಾಗಿ ಅಮೆರಿಕದ ಸೇನಾ ನೆಲೆಗಳ ಮೇಲೆ ತೀವ್ರ ದಾಳಿ ನಡೆಸುವುದಾಗಿ ಇರಾನ್ ಈಗಾಗಲೇ ಎಚ್ಚರಿಸಿದೆ. ಹೀಗಾಗಿ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಜಾಗತಿಕ ತೈಲ ಮಾರುಕಟ್ಟೆ ಮತ್ತು ಪೂರೈಕೆ ಸರಪಳಿಯ ಮೇಲೆ ಪರಿಣಾಮ ಬೀರಬಹುದೆಂಬ ಆತಂಕ ಎದುರಾಗಿದೆ.

