ಹಾಸನ: ಹಾಸನ ಜಿಲ್ಲಾಧಿಕಾರಿ ಮತ್ತು ಸಚಿವ ಶಿವಲಿಂಗೇಗೌಡ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಲಂಚದ ಆರೋಪ ಮಾಡಿದ್ದಾರೆ. ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ಆಪ್ತ ಸಹಾಯಕ ಶಶಿಕಿರಣ್ ಅವರಿಗೆ ಸೇರಿದ್ದೆನ್ನಲಾದ ವಾಟ್ಸಾಪ್ ಚಾಟ್ಗಳನ್ನು ಬಹಿರಂಗಪಡಿಸಿ, ಮೂರು ಕ್ರಷರ್ಗಳ ಕಡತಗಳ ವಿಲೇವಾರಿಗೆ ₹60ರಿಂದ ₹75 ಲಕ್ಷದವರೆಗೆ ಹಣದ ಬೇಡಿಕೆ ನಡೆದಿತ್ತು ಎಂದು ಆರೋಪಿಸಿದ್ದಾರೆ.
ಚಾಟ್ಗಳಲ್ಲಿ ಹಣದ ಹಂಚಿಕೆ, ಮಧ್ಯವರ್ತಿಗಳ ವ್ಯವಹಾರ ಹಾಗೂ ಏಪ್ರಿಲ್ನಲ್ಲಿ ಒಂದು ಕೆಲಸಕ್ಕಾಗಿ ₹15 ಲಕ್ಷ ಪಡೆದಿರುವ ಕುರಿತು ಸಂಭಾಷಣೆ ಇದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿಸುವುದಾಗಿ ಸಚಿವ ಶಿವಲಿಂಗೇಗೌಡ ಹೇಳಿದ್ದರೆಂಬ ಉಲ್ಲೇಖವೂ ಚಾಟ್ನಲ್ಲಿದೆ. ಕೊನೆಗೆ ₹75 ಲಕ್ಷ ನೀಡಿ ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂಬ ಸಂದೇಶವನ್ನೂ ಅವರು ಓದಿದ್ದಾರೆ.

ಈ ದಾಖಲೆಗಳನ್ನು ಯಾರೋ ತಮಗೆ ತಂದುಕೊಟ್ಟಿದ್ದಾರೆ ಎಂದು ತಿಳಿಸಿದ ಕುಮಾರಸ್ವಾಮಿ, ಹಾಸನ ಮಾತ್ರವಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲೂ ಇಂತಹ ಪರಿಸ್ಥಿತಿ ಇದೆ ಎಂದು ಆರೋಪಿಸಿದ್ದಾರೆ. ವಾಟ್ಸಾಪ್ ಚಾಟ್ಗಳ ಸತ್ಯಾಸತ್ಯತೆ ಕುರಿತು ಡಿಜಿ-ಐಜಿಪಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಆರೋಪಗಳನ್ನು ತಳ್ಳಿಹಾಕಿದ ಜಿಲ್ಲಾಧಿಕಾರಿ
ಕುಮಾರಸ್ವಾಮಿ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ವಾಟ್ಸಾಪ್ ಚಾಟ್ಗಳು ಮತ್ತು ಅವುಗಳಲ್ಲಿನ ಆರೋಪಗಳು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಚಾಟ್ಗಳ ಸತ್ಯಾಸತ್ಯತೆ ತಿಳಿಯಲು ದೂರು ನೀಡುವುದಾಗಿ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸುವ ಬದಲು ಅಧಿಕೃತವಾಗಿ ದೂರು ಸಲ್ಲಿಸಬೇಕಿತ್ತು ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಈ ವಿಚಾರವಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸುವುದಾಗಿಯೂ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

