2028ರ ಐಪಿಎಲ್‌ನಲ್ಲಿ 12 ತಂಡಗಳ ಸೇರ್ಪಡೆ ಇಲ್ಲ: ಬಿಸಿಸಿಐ ಸ್ಪಷ್ಟನೆ

ನವದೆಹಲಿ: 2028ರ ಐಪಿಎಲ್‌ನಲ್ಲಿ ಹಾಲಿ 10 ತಂಡಗಳ ಬದಲಿಗೆ 12 ತಂಡಗಳು ಕಣಕ್ಕಿಳಿಯಲಿವೆ ಎಂಬ ವರದಿಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಳ್ಳಿಹಾಕಿದೆ. ತಂಡಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸುವ ಯಾವುದೇ ಪ್ರಸ್ತಾಪ ಸದ್ಯಕ್ಕೆ ಮಂಡಳಿಯ ಮುಂದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿದ್ದಾರೆ.

12 ತಂಡಗಳ ಸೇರ್ಪಡೆ ಕುರಿತು ಅಧಿಕೃತ ಅಥವಾ ಅನೌಪಚಾರಿಕವಾಗಿ ಯಾವುದೇ ಚರ್ಚೆ ನಡೆದಿಲ್ಲ. ಐಪಿಎಲ್ ವಿಸ್ತರಣೆಗೆ ಸಂಬಂಧಿಸಿದ ಮಾಧ್ಯಮ ವರದಿಗಳು ಕೇವಲ ಊಹಾಪೋಹಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಐಪಿಎಲ್‌ಗೆ ಭಾರಿ ಬೇಡಿಕೆ ಇದ್ದರೂ, ಹೊಸ ತಂಡಗಳ ಸೇರ್ಪಡೆಗೆ ಸದ್ಯ ಯಾವುದೇ ಅವಕಾಶವಿಲ್ಲ. ಬಿಸಿಸಿಐನ ಸಂಪೂರ್ಣ ಗಮನ 2027ರ ಐಪಿಎಲ್ ಟೂರ್ನಿಯತ್ತ ಕೇಂದ್ರೀಕೃತವಾಗಿದೆ. 20ನೇ ಆವೃತ್ತಿಯಾಗಿರುವುದರಿಂದ ಅದನ್ನು ಅದ್ಧೂರಿಯಾಗಿ ಆಯೋಜಿಸಲು ಮಂಡಳಿ ಸಿದ್ಧತೆ ನಡೆಸುತ್ತಿದೆ.

Oplus_16908288

ಇದೇ ವೇಳೆ, 2027ರ ಮೆಗಾ ಹರಾಜಿಗೂ ಮುನ್ನ ಆಟಗಾರರ ಖರೀದಿ ಮೊತ್ತದ ಮಿತಿಯನ್ನು ₹125 ಕೋಟಿಯಿಂದ ₹150 ಕೋಟಿಗೆ ಹೆಚ್ಚಿಸಲಾಗುತ್ತದೆ ಎಂಬ ವರದಿಗಳನ್ನೂ ಸೈಕಿಯಾ ನಿರಾಕರಿಸಿದ್ದಾರೆ. ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2027ರಲ್ಲಿ ಮೆಗಾ ಹರಾಜು ನಡೆಯಲಿದೆ. ಆದರೆ, ಈ ಬಾರಿ ಮೆಗಾ ಹರಾಜು ಇರುವುದಿಲ್ಲ. ಡಿಸೆಂಬರ್ 16ರಂದು ನಡೆಯಲಿರುವ ಮಿನಿ ಹರಾಜು ಪ್ರಸ್ತುತ ಐಪಿಎಲ್ ಚಕ್ರದ ಕೊನೆಯ ಹರಾಜಾಗಿರಲಿದೆ ಎಂದು ತಿಳಿಸಿದ್ದಾರೆ.

Related posts