IFFI 2026: ‘ಐ ಮ್ಯಾಟರ್’ ಮಿಡ್-ಫೆಸ್ಟ್ ಚಿತ್ರವಾಗಿ ಪ್ರದರ್ಶನ

ಪಣಜಿ: 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ರೊಮೇನಿಯನ್ ಚಿತ್ರನಿರ್ದೇಶಕಿ ಅಲಿನಾ ಶೆರ್ಬಾನ್ ಅವರ ‘ಐ ಮ್ಯಾಟರ್’ (Eu Contez) ಚಿತ್ರವನ್ನು ಮಿಡ್-ಫೆಸ್ಟ್ ಚಲನಚಿತ್ರವಾಗಿ ಆಯ್ಕೆ ಮಾಡಲಾಗಿದೆ. 101 ನಿಮಿಷಗಳ ಅವಧಿಯ ಈ ಚಿತ್ರವು ಉತ್ಸವದಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿದೆ.

ರೊಮೇನಿಯಾ, ಜರ್ಮನಿ ಮತ್ತು ಬೆಲ್ಜಿಯಂ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವು ಅನಾಥಾಶ್ರಮದಲ್ಲಿ ಬೆಳೆದ ರೆಬೆಕಾ ಎಂಬ ಯುವ ರೋಮಾ ಮಹಿಳೆಯ ಬದುಕಿನ ಕಥೆಯನ್ನು ಒಳಗೊಂಡಿದೆ. ಅನಾಥಾಶ್ರಮ ತೊರೆಯಲು ಸಿದ್ಧವಾಗಿರುವ ಆಕೆ, ಜೈಲಿನಿಂದ ಬಿಡುಗಡೆಯಾಗಲಿರುವ ತಂದೆಯನ್ನು ಮತ್ತೆ ಭೇಟಿಯಾಗುವ ನಿರೀಕ್ಷೆಯಲ್ಲಿರುತ್ತಾಳೆ. ಜೊತೆಗೆ ನಟನೆಯನ್ನು ಕಲಿಯಲು ವಿಶ್ವವಿದ್ಯಾಲಯಕ್ಕೂ ಪ್ರವೇಶ ಪಡೆಯುತ್ತಾಳೆ. ಹೊಸ ಬದುಕಿನತ್ತ ಹೆಜ್ಜೆಯಿಡುವ ಸಂದರ್ಭದಲ್ಲಿ ಆಕೆಯ ಹಿಂದಿನ ನೋವಿನ ಅನುಭವಗಳು ಮತ್ತೆ ಎದುರಾಗುತ್ತವೆ.

ರೊಮೇನಿಯನ್ ಮತ್ತು ರೋಮಾನಿ ಭಾಷೆಗಳಲ್ಲಿ ಮೂಡಿಬಂದಿರುವ ಈ ಚಿತ್ರವು ಅಸ್ತಿತ್ವ, ಕುಟುಂಬ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ತನಗೆ ಸೇರಿದ ನೆಲೆಯ ಹುಡುಕಾಟದಂತಹ ವಿಷಯಗಳನ್ನು ಅನಾವರಣಗೊಳಿಸುತ್ತದೆ. ಡೆನಿಸಾ ಫಾರ್ಕಾಸ್ ರೆಬೆಕಾ ಪಾತ್ರದಲ್ಲಿ ನಟಿಸಿದ್ದು, ಸೊರಿನ್ ಮಿಹಾಯ್, ಏಂಜೆಲಿನಾ ಪಾವೆಲ್ ಸೇರಿದಂತೆ ಇತರರು ಅಭಿನಯಿಸಿದ್ದಾರೆ.

ನಟಿ ಹಾಗೂ ನಾಟಕಕಾರ್ತಿಯಾಗಿರುವ ಅಲಿನಾ ಶೆರ್ಬಾನ್ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕಿಯಾಗಿ ಪದಾರ್ಪಣೆ ಮಾಡಿದ್ದಾರೆ. ಈ ಹಿಂದೆ ‘ಅಲೋನ್ ಅಟ್ ಮೈ ವೆಡ್ಡಿಂಗ್’, ‘ಜಿಪ್ಸಿ ಕ್ವೀನ್’ ಮತ್ತು ‘ಹೌಸ್‌ಕೀಪಿಂಗ್ ಫಾರ್ ಬಿಗಿನರ್ಸ್’ ಚಿತ್ರಗಳ ಮೂಲಕ ಅವರು ಗುರುತಿಸಿಕೊಂಡಿದ್ದರು.

2026ರ ಸೆಪ್ಟೆಂಬರ್‌ನಲ್ಲಿ ನಡೆದ 83ನೇ ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ‘ವೆನಿಸ್ ಸ್ಪಾಟ್‌ಲೈಟ್’ ವಿಭಾಗದಲ್ಲಿ ‘ಐ ಮ್ಯಾಟರ್’ ಪ್ರದರ್ಶನಗೊಂಡಿತ್ತು. ಈ ಚಿತ್ರ ‘ಅರ್ಮಾನಿ ಬ್ಯೂಟಿ ಆಡಿಯನ್ಸ್ ಅವಾರ್ಡ್’ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿತ್ತು.

ನವೆಂಬರ್ 24ರಂದು ಸಂಜೆ 4.30ಕ್ಕೆ ಪಣಜಿ ಮತ್ತು ಪೋರ್ವೊರಿಮ್‌ನ ಪಿವಿಆರ್ ಐನಾಕ್ಸ್ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಪ್ರದರ್ಶನಗೊಳ್ಳಲಿದೆ. ನಿರ್ದೇಶಕಿ ಅಲಿನಾ ಶೆರ್ಬಾನ್ ಮತ್ತು ಮುಖ್ಯ ನಟಿ ಡೆನಿಸಾ ಫಾರ್ಕಾಸ್ ಉತ್ಸವದಲ್ಲಿ ಭಾಗವಹಿಸಲಿದ್ದು, ಪಣಜಿಯಲ್ಲಿ ರೆಡ್ ಕಾರ್ಪೆಟ್ ಕಾರ್ಯಕ್ರಮವೂ ನಡೆಯಲಿದೆ.

ನವೆಂಬರ್ 20ರಿಂದ 28ರವರೆಗೆ ಗೋವಾದ ವಿವಿಧ ಸ್ಥಳಗಳಲ್ಲಿ ನಡೆಯಲಿರುವ ಐಎಫ್ಎಫ್‌ಐನಲ್ಲಿ 86 ದೇಶಗಳ 150ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

Related posts