ಬೆಂಗಳೂರು: ಲಾಕ್’ಡೌನ್ ನಿಯಮ ಸಡಿಲಿಕೆಯಾಗಿ ಜನಜೀವನ ಸ್ವಲ್ಪ ಮಟ್ಟಿಗೆ ಸಹಜ ಸ್ಥಿತಿಯತ್ತ ಮರಳಲಾರಂಭಿಸಿದೆ ಎನ್ನುವಷ್ಟರಲ್ಲೇ ರಾಜ್ಯದಲ್ಲಿ ಕೋವಿಡ್-19 ಸೋಂಕು ಮತ್ತೊಬ್ಬರನ್ನು ಬಲಿತೆಗೆದುಕೊಂಡಿದೆ. ಮಹಾಮಾರಿ ಕೊರೊನಾ ಸೋಂಕಿಗೆ ಮಂಗಳವಾರ ವಿಜಯಪುರದ 62 ವರ್ಷದ ವೃದ್ಧೆ ಸಾವಿಗೀಡಾಗಿದ್ದಾರೆ. ಈ ಮೂಲಕ ವಿಜಯಪುರ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ರೋಗಿಯೊಬ್ಬರ ಸಂಪರ್ಕದಿಂದ ಈ ಮಹಿಳೆಗೆ ಸೋಂಕು ತಗುಲಿತ್ತು ಎನ್ನಲಾಗಿದೆ. ಮಧುಮೇಹ, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಈ ವೃದ್ದೆ 3-4 ದಿನಗಳ ಹಿಂದೆ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಈ ನಡುವೆ, ದಾವಣಗೆರೆಯ 21 ಕೊರೋನಾ ಸೋಂಕಿತ ಪ್ರಕರಣಗಳು ಸೇರಿ ರಾಜ್ಯದಲ್ಲಿ ಭಾನುವಾರ ಸಂಜೆಯಿಂದ ಸೋಮವಾರ ಮಧ್ಯಾಹ್ನದವರೆಗೆ 28 ಪ್ರಕರಣಗಳು ಪತ್ತೆಯಾಗಿವೆ. ಇದೆ ವೇಳೆ, ಗ್ರೀನ್ ಝೋನ್’ನಲ್ಲಿದ್ದ ಹಾವೇರಿಯ ಸವಣೂರಿನ 32 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.