‘ಪವರ್ ಸ್ಟಾರ್’ ಮುಂದಿನ ಸಿಎಂ..? ರಾಜ್ಯ ರಾಜಕಾರಣದಲ್ಲಿ ‘ಕೈ ಸೂತ್ರ’ದ ಕೌತುಕ

ರಾಜ್ಯ ರಾಜಕಾರಣ ದಿನಕ್ಕೊಂದು ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ಆಡಳಿತಾರೂಢ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದರೆ ಇನ್ನೊಂದೆಡೆ ಪ್ರತಿಪಕ್ಷಗಳ ಪಾಳಯದಲ್ಲಿ ‘ಡಿಕೆಶಿ ಮನ್ವಂತರ’ದ ಸಂಚಲನ. ರಾಜ್ಯ ರಾಜಕಾರಣದ ಟ್ರಬಲ್ ಶೂಟರ್ ಎಂದೇ ಗುರುತಾಗಿರುವ ಕೈ ನಾಯಕ “ಹಿಂದಿನ ಸರ್ಕಾರದಲ್ಲಿ ಪವರ್ ಮಿನಿಸ್ಟರ್.. ಇದೀಗ ಅವರೇ ಕಾಂಗ್ರೆಸ್ಸಲ್ಲಿ ಪವರ್ ಸ್ಟಾರ್” ಎಂದು ಸ್ವತಃ ರಾಹುಲ್ ಗಾಂಧಿಯವರೇ ಬಣ್ಣಿಸಿದ್ದಾರೆ. ಹಾಗಾಗಿಯೇ ಪ್ರದೇಶ ಕೈ ಪಟ್ಟವನ್ನು ಡಿಕೆಶಿ ಕೈಗೆ ಕೊಟ್ಟಿದ್ದು, ಈಗೀಗ ರಾಜ್ಯ ರಾಜಕಾರಣ ಕ್ರಮಿಸುತ್ತಿರುವ ಎಲ್ಲಾ ಮಜಲುಗಳೂ ಕದನ ಕೌತುಕ ಸೃಷ್ಟಿಸುತ್ತಲೇ ಇವೆ.

ಕೆಲ ತಿಂಗಳ ಹಿಂದೆ ED ಕೇಸ್’ನಲ್ಲಿ ಹಲವು ದಿನಗಳ ಕಾಲ ಬಂಧಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಚರಿತ್ರೆ ಕಮರಿ ಹೋಯಿತೆಂದೇ ಅನೇಕ ಪಂಡಿತರು ಬಣ್ಣಿಸಿದ್ದರು. ಆದರೆ ಈ ಛಲಗಾರನ ಪಾಲಿಗೆ ಅದುವೇ ವರದಾನವಾಯಿತು. ಕೈ ಪಾಳಯದಲ್ಲಿ ಬದಲಿ ಸಮರ್ಥರು ಇಲ್ಲ ಎನ್ನುವ ರೀತಿಯಲ್ಲಿ ಈ ದಂಡನಾಯಕ ತನ್ನದೇ ಶೈಲಿಯಲ್ಲಿ  ದಂಡಯಾತ್ರೆ ಕೈಗೊಂಡಿದ್ದಾರೆ. ಅದೂ ಕೂಡಾ ದಕ್ಷಿಣ ಭಾರತದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರವನ್ನು ತರುವ ಶಪಥದೊಂದಿಗೆ.

ಆದರೆ ಡಿಕೆಶಿಯಿಂದ ಇದು ಸಾಧ್ಯವೇ?

ಚತುರ ನಾಯಕನಾಗಿ ಹೆಜ್ಜೆ ಇಡುವುದಾದರೆ ಡಿಕೆಶಿಗಿದು ಚೈತ್ರಕಾಲ. ಅದಕ್ಕಾಗಿ ಅವರು ದೃಷ್ಟಿ ಹಾಯಿಸಿರುವುದು ಮೂರು ಕಡೆ. ಸರ್ಕಾರದ ವಿರುದ್ಧ ಅಸ್ತ್ರ, ಪಕ್ಷ ಸಂಘಟನಾ ಮಂತ್ರ ಹಾಗೂ ಪದಾಧಿಕಾರಿಗಳ ಬದಲಾವಣೆಯ ಸೂತ್ರ. ಆದರೆ ಅವರು ಆಯ್ಕೆ ಮಾಡಿರುವುದು ಎರಡೇ ವಿಚಾರ. ಸರ್ಕಾರ ಮತ್ತು ಆಡಳಿತ ಪಕ್ಷಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಕೈ ಸೈನ್ಯ ಬಲಪಡಿಸಲಷ್ಟೇ ಲಕ್ಷ್ಯ ಹಾಗೂ ಜಾತಿ ಬಂಧುಗಳ ವರ್ಚಸ್ವೀ  ನಾಯಕನಾಗಿ ಗುರುತಾಗುವುದು.

ಇದು ನಿಜಕ್ಕೂ ಚಾಣಕ್ಯ ಹಾದಿ ಎಂದೇ ಹೇಳಬಹುದು. ಒಕ್ಕಲಿಗ ನಾಯಕನಾಗಿರುವ ಶಿವಕುಮಾರ್ ರಾಷ್ಟ್ರ ರಾಜಕಾರಣದ ದೊಡ್ಡಗೌಡರ ಮನೆಯ ಕದ ತಟ್ಟಿ, ಪಾದ ಮುಟ್ಟಿ ಅವರ ಆಶೀರ್ವಾದ ಪಡೆದಿದ್ದಾರೆ. ಅದಷ್ಟೇ ಅಲ್ಲ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವುದು ಹಾಗೂ ಅದಕ್ಕೆ ಪ್ರತಿಯಾಗಿ ತಮ್ಮ ಯಶೋಗಾಥೆಗೆ ಜೆಡಿಎಸ್’ನ ಬೆಂಬಲ ಪಡೆಯುವುದು. ಇಲ್ಲಿ ಜೆಡಿಎಸ್ ಬಯಸಿದ್ದೂ ಅದನ್ನೇ. ತಮ್ಮ ಸರ್ಕಾರವನ್ನು ಬೀಳಿಸಿ ಅಧಿಕಾರವನ್ನ ಕಿತ್ತುಕೊಂಡ ಕಮಲ ಪಾಳಯದ  ವಿರುದ್ಧ ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಎದುರು ನೋಡುತ್ತಿರುವ ಕುಮಾರಸ್ವಾಮಿ ಈಗಲೇ ಡಿಕೆಶಿಗೆ ಜೈ ಎಂದಿದ್ದಾರೆ.

ಆರೆಸ್ಸೆಸ್ಸಿಗೂ ಹಿತವಾದ ಡಿಕೆಶಿ?

ಗೌಡರ ಕುಟುಂಬದ ಸಾಂಪ್ರದಾಯಿಕ ರಾಜಕೀಯ ಎದುರಾಳಿ ಸಿದ್ದರಾಮಯ್ಯ ಬೆಂಬಲಿಗರನೇಕರು ಬಿಜೆಪಿ ಸೇರಿ ಮಂತ್ರಿಗಳಾಗಿದ್ದರೂ ಅವರಾರೂ ಸೇಫ್ ಅಲ್ಲ. ಅವರಿಂದಾಗಿಯೇ ಕಮಲ ಪಾಳಯದಲ್ಲಿ ತಳಮಳ ಉಂಟಾಗಿದೆ. ಮೂಲ ಬಿಜೆಪಿಗರಿಗೆ ಸಿಗಬೇಕಾದ ಅವಕಾಶಗಳು ವಲಸಿಗರ ಪಾಲಾಗುತ್ತಿರುವುದರಿಂದ ಬಲಾಢ್ಯ ಗುಂಪು ಡಿಕೆಶಿ ಪ್ರಾಬಲ್ಯವನ್ನು ಬಯಸುತ್ತಿದೆ. ಅಷ್ಟೇ ಅಲ್ಲ ಡಿಕೆಶಿ ರಾಜಕೀಯವಾಗಿ ಕಾಂಗ್ರೆಸ್’ನಲ್ಲಿದ್ದರೂ ಆರೆಸ್ಸೆಸ್ ಸೈನಿಕರ ಪಾಲಿಗೆ ಸಮ್ಮಿತ್ರರೂ ಹೌದು. ಹಾಗಾಗಿ ಪ್ರಸ್ತುತ ಪರಿಸ್ಥಿಯನ್ನು ಪರಿಪೂರ್ಣವಾಗಿ ಬಳಸಿಕೊಳ್ಳಲು ಡಿಕೆಶಿ ಮುಂದಾಗಿದ್ದಾರೆ.

ಇದೆಲ್ಲದರ ನಡುವೆ, ಮಾಧ್ಯಮಗಳನ್ನು ಅವಲಂಬಿಸುವ ಮೂಲಕ ಡಿಕೆಶಿ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಅವಲಂಭಿಸಲೆಂದೇ ಅವರು ಮಾಧ್ಯಮ ಪ್ರವೀಣರ ಸೈನ್ಯ ಕಟ್ಟಿದ್ದಾರೆ. ಇದು ಅವರ ಪ್ರಚಾರಕ್ಕಲ್ಲವಂತೆ. ತನ್ನ ಕೆಲಸ ಜನರಿಗೆ ತಲುಪಬೇಕು, ಆ ಮೂಲಕ ರಾಜಕೀಯ ವರ್ಚಸ್ಸು ನೂರ್ಮಡಿಗೊಳ್ಳಬೇಕೆಂಬುದು ಅವರ ದೂರದೃಷ್ಟಿ. ಇದೇ ವೇಳೆ ಬ್ರಹ್ಮಾಸ್ತ್ರ ಪ್ರಯೋಗಿಸಲು ಸಜ್ಜಾಗಿರುವ ಅವರು, ಒಂದೊಮ್ಮೆ ಯಡಿಯೂರಪ್ಪ ಸರ್ಕಾರ ಪತನವಾದರೆ  ಪರ್ಯಾಯ ಸರ್ಕಾರ ರಚಿಸದೇ ಚುನಾವಣೆಗೆ ಹೋಗಿ ಗೆದ್ದು ಬರುವ ಯೋಚನೆಯಲ್ಲಿದ್ದಾರೆ.

ಅದೇನೇ ಇರಲಿ, ಕಾಲಾಯ ತಸ್ಮೈ ನಮಃ ಎನ್ನುವ ಸತ್ಯವು ಡಿಕೆಶಿ ಅವರ ರಾಜಕೀಯ ಬದುಕಲ್ಲೂ ಸಾಕ್ಷಿಯಾಗುತ್ತಿದೆ ಎಂಬುದು ಅವರ ಆಪ್ತರ ಮಾತು.

ಇದನ್ನೂ ಓದಿ.. ಸಹಾಯ ಹಸ್ತ: ಅತ್ತ ರಾಜೇಶ ‘ನಾಯಕ’.. ಇತ್ತ ಡಿಕೆಶಿ ‘ಹೀರೋ’

 

Related posts