ಕೆ.ಆರ್.ಎಸ್ ಮುಂಭಾಗ ಒಡೆಯರ್ ಪ್ರತಿಮೆ‌ ; ರಾಜಮಾತೆ ಹರ್ಷ

ಮೈಸೂರು: ರಾಜ್ಯದ ರೈತರ ಜೀವನಾಡಿ ಕೃಷ್ಣರಾಜ ಸಾಗರ ಬಳಿ ಮೈಸೂರು ಮಹಾರಾಜರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ್ ರಾಗಿದ್ದ ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪಿಸುವ ಸರ್ಕಾರದ ನಿರ್ಧಾರಕ್ಕೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಸಂತಸ ವ್ಯಕ್ತಪಡಿಸಿದ್ದಾರೆ.

ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಮೈಸೂರು ಅರಮನೆಯಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಭೇಟಿ ಮಾಡಿ ಆಶಿರ್ವಾದ ಪಡೆದರು. ಈ ಸಂದರ್ಭದಲ್ಲಿ ಅವರು ಕೃಷ್ಣರಾಜ ಸಾಗರ ಬಳಿ ಮೈಸೂರು ಮಹಾರಾಜರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ್ ರಾಗಿದ್ದ ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪಿಸುವ ವಿಚಾರ ಕುರಿತು ಚರ್ಚಿಸಿದರು. ಸರ್ಕಾರದ ತೀರ್ಮಾನಕ್ಕೆ ರಾಜಮಾತೆ ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ನೀರಾವರಿ, ಹೈನುಗಾರಿಕೆ, ಕೃಷಿ ಪ್ರಧಾನವಾಗಿ ಇನ್ನೂ ಕರ್ನಾಟಕವು ಸಮೃದ್ಧಿಯಿಂದ ಇದೆ ಎಂದರೆ ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪರಿಕಲ್ಪನೆ ಮತ್ತು ಕೊಡುಗೆಯಿಂದ ಎಂದರು.

ಬರಡಾಗಿದ್ದ ಬಯಲು‌ಸೀಮೆಗೆ ನೀರೊದಗಿಸಲು ವಾಣಿವಿಲಾಸ ಸಾಗರ ಜಲಾಶಯ ನಿರ್ಮಿಸಿದ ಅರಸರು, ತಮ್ಮ ಸ್ವಂತ ಚಿನ್ನವನ್ನು ಮಾರಿ ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣ ಮಾಡುವ ಮೂಲಕ ಕಾವೇರಿ ನೀರನ್ನು ಹರಿಸಿ ಕೋಟ್ಯಾಂತರ ಜನರ ಪಾಲಿನ ಕಷ್ಟದ ಕಣ್ಣೀರನ್ನು ಒರೆಸಿದರು. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ್ ರಾಗಿದ್ದ ಸರ್.ಎಂ ವಿಶ್ವೇಶ್ವರಯ್ಯ ರವರ ಪ್ರತಿಮೆಗಳನ್ನು ಕೆ.ಆರ್. ಎಸ್ ದಕ್ಷಿಣ ದ್ವಾರದ ಮುಂಭಾಗ ನಿರ್ಮಿಸಲು 8.5 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದ್ದು ಶೀಘ್ರವೇ ಪೂರ್ಣಗೊಳ್ಳಿಲಿದೆ ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

ಇದನ್ನೂ ಓದಿ.. ಕರ್ನಾಟಕದಲ್ಲಿ ಮಿಡತೆ ಹಾವಳಿ ಸಾಧ್ಯತೆ ತೀರಾ ಕಡಿಮೆ: ರೈತರಿಗೆ ಸರ್ಕಾರ

 

Related posts