ಕರ್ನಾಟಕದಲ್ಲಿ ಮಿಡತೆ ಹಾವಳಿ ಸಾಧ್ಯತೆ ತೀರಾ ಕಡಿಮೆ: ರೈತರಿಗೆ ಸರ್ಕಾರ ಅಭಯ ಅಭಯ

ಬೆಂಗಳೂರು: ಬಹುತೇಕ ರಾಜ್ಯಗಳಲ್ಲಿ ಮಿಡತೆ ಹಾವಳಿ ರೈತರನ್ನು ಕಂಗಾಲಾಗಿಸಿದೆ. ಕೋಲಾರ ಜಿಲ್ಲೆಗೂ ಈ ಮಿಡತೆ ಸೈನ್ಯ ಲಗ್ಗೆ ಹಾಕಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಈ ಮಿಡತೆ ಬಗ್ಗೆ ರಾಜ್ಯದ ರೈತರು ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಕೋಲಾರದಲ್ಲಿ ಕಂಡುಬಂದಿರುವುದು ಸಾಮಾನ್ಯ ಎಕ್ಕೆ ಗಿಡದ ಮಿಡತೆಯಾಗಿದ್ದು, ಲೋಕ್ಟಸ್ ಮಿಡತೆಗೂ ಇದಕ್ಕೂ ಸಂಬಂಧವಿಲ್ಲ. ಕರ್ನಾಟಕಕ್ಕೆ ಲಾಕ್ಟಸ್ ಮಿಡತೆ ಹಾವಳಿ ಸಾಧ್ಯತೆ ತೀರಾ ಕಡಿಮೆಯಿದ್ದು, ರೈತರು ಯಾವುದೇ ಕಾರಣಕ್ಕೂ ಗಾಬರಿಗೊಳ್ಳುವ ಅವಶ್ಯಕತೆಯಿಲ್ಲ ಎಂದು ಅವರು ಹೇಳಿದ್ದಾರೆ.

ಮಧ್ಯಪ್ರದೇಶ, ಮಹಾರಾಷ್ಟ್ರ ರಾಜಸ್ಥಾನ ಸೇರಿದಂತೆ ಇತರೆ ರಾಜ್ಯಗಳಲ್ಲಿ ರೈತರನ್ನು ಬಾಧಿಸಿರುವ ಲೋಕ್ಟಸ್ ಮಿಡತೆ ಹಾವಳಿ ರಾಜ್ಯಕ್ಕೆ ಬಾಧಿಸದಂತೆ ತೆಗೆದುಕೊಳ್ಳಬಹುದಾದ ಕ್ರಮಗಳು ಮುನ್ನೆಚ್ಚರಿಕೆಗಳ ಕುರಿತು ಕೃಷಿ ಅಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯದ ಸಂಶೋಧಕರು ಹಾಗೂ ಕೀಟಶಾಸ್ತ್ರಜ್ಞರೊಂದಿಗೆ ಸಭೆ ನಡೆಸಿದ ಕೃಷಿಸಚಿವರು, ಸುದ್ದಿಗೋಷ್ಠಿ ನಡೆಸಿ ಸರ್ಕಾರದ ಕ್ರಮಗಳ ಬಗ್ಗೆ ವಿವರಿಸಿದರು. ಮಿಡತೆ ಗಾಳಿಯನ್ನು ಅವಲಂಬಿಸಿರುವುದರಿಂದ ಗಾಳಿಯ ದಿಕ್ಕು ಬದಲಾದಂತೆ ಮಿಡತೆಗಳು ಪಸರಿಸುವುದು ಬದಲಾಗುತ್ತದೆ. ಕೃಷಿ ತಜ್ಞರ ಪ್ರಕಾರ ಕರ್ನಾಟಕಕ್ಕೆ ಮಿಡತೆ ಹಾವಳಿ ಸಾಧ್ಯತೆ ಕಡಿಮೆಯಿದೆ ಎಂದರು.

ಮೇ 26ರಿಂದ ಎರಡು ದಿನಗಳು ಮಾತ್ರ ದಕ್ಷಿಣಾಭಿಮುಖವಾಗಿ ಗಾಳಿ ಬೀಸುತ್ತಿದ್ದು, ಎರಡು ದಿನಗಳ ಬಳಿಕ ಅಂದರೆ ಮೇ.30 ರಷ್ಟೊತ್ತಿಗೆ ಅದರ ದಿಕ್ಕು ಬದಲಾಗುವ ಸಾಧ್ಯತೆಯಿದೆ. ಹೀಗಾಗಿ ಮಿಡತೆಗಳು ಕರ್ನಾಟಕ ಮುಟ್ಟುವ ಸಾಧ್ಯತೆ ಕಡಿಮೆಯಿದೆ. ಬೀದರ್ ಗಡಿಯಿಂದ ಮಿಡತೆಗಳು ಸುಮಾರು 450 ಕಿ.ಮೀ.ದೂರದಲ್ಲಿರುವುದರಿಂದ ರಾಜ್ಯ ಮುಟ್ಟುವ ಸಾಧ್ಯತೆ ಬಹಳಷ್ಟು ಕಡಿಮೆ ಇದೆ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಇದನ್ನೂ ಓದಿ.. ಐದು ರಾಜ್ಯಗಳ ಜನರಿಗೆ ಕರ್ನಾಟಕ ಪ್ರವೇಶ ನಿರ್ಬಂಧ; ಪ್ರತಿಪಕ್ಷ ಆಕ್ಷೇಪ

 

Related posts