ದೆಹಲಿ: ಚೀನಾ ಭಾರತ ಗಡಿ ಸಂಘರ್ಷ ತಾರಕಕ್ಕೇರುತ್ತಿರುವಂತೆಯೇ ರಫೇಲ್ ಯುದ್ಧ ವಿಮಾನಗಳು ಭಾರತದ ತೆಕ್ಕೆಗೆ ಸೇರಲು ದಿನಗಣನೆ ಆರಂಭವಾಗಿದೆ. ಆರು ರಫೇಲ್ ಯುದ್ಧ ವಿಮಾನಗಳು ಜುಲೈ 27ರೊಳಗೆ ದೇಶಕ್ಕೆ ಆಗಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಚೀನಾ ಜೊತೆಗೆ ಸಂಘರ್ಷದಲ್ಲಿ 20 ಯೋಧರು ಹುತಾತ್ಮರಾದ ಬಳಿಕ ಭಾರತ ಮತ್ತಷ್ಟು ಚುರುಕಾಗಿದೆ. ಈ ಸಂಬಂಧ ಕೆಲ ದಿನಗಳ ಹಿಂದೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲೆ ಜೊತೆ ದೂರವಾಣಿ ಸಂಭಾಷಣೆ ನಡೆಸಿದ್ದು, ಯುದ್ಧ ವಿಮಾನಗಳನ್ನು ತಲುಪಿಸಲು ಫ್ರಾನ್ಸ್ ಒಪ್ಪಿದೆ.
ಸುಮಾರು 58,000 ಕೋಟಿ ರೂಪಾಯಿ ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ ಫ್ರಾನ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಅದರಂತೆ ಆರು ಯುದ್ಧ ವಿಮಾನಗಳು ಜುಲೈ 27ರೊಳಗೆ ದೇಶಕ್ಕೆ ಆಗಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.