ಕೊರೋನಾ ಸಂಕಷ್ಟ ಕಾಲದಲ್ಲಿ ಜವರಾಯ ಕೂಡಾ ಅಟ್ಟಹಾಸ ಮೆರೆದಿದ್ದಾನೆ. ಅಗೋಚರ ವೈರಾಣು ಹಾವಳಿಯಿಂದಾಗಿ ಬೀದಿಗೆ ಬಿದ್ದಿರುವ ಬಡಪಾಯಿ ಕಾರ್ಮಿಕರು ವಿಧಿಯಾಟಕ್ಕೆ ಬಲಿಯಾಗುತ್ತಲೇ ಇದ್ದಾರೆ. ಉತ್ತರ ಪ್ರದೇಶದ ಔರೈಯಾ ಬಳಿ ಸಂಭವಿಸಿದ ಭೀಕರ ಅಪಘಾತ ಸುಮಾರು 24 ವಲಸೆ ಕಾರ್ಮಿಕರನ್ನು ಬಳಿ ಪಡೆದಿದೆ.
ಉತ್ತರ ಪ್ರದೇಶದ ಔರೈಯಾ ಬಳಿ ಎರಡು ಟ್ರಕ್ ಗಳು ಮುಖಾ ಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಲಾರಿಗಳಲ್ಲಿದ್ದ ಬಹುತೇಕ ಕಾರ್ಮಿಕ ವಲಸಿಗರು ಸಾವನ್ನಪ್ಪಿದ್ದಾರೆ.
ಕೆಲಸ ಅರಸಿ ರಾಜಸ್ಥಾನಕ್ಕೆ ವಲಸೆ ಹೋಗಿದ್ದ ಸಾವಿರಾರು ಕಾರ್ಮಿಕರು ಲಾಕ್”ನಿಂದಾಗಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಪ್ರಸಕ್ತ ಕೆಲಸವಿಲ್ಲದೇ ಬೀದಿಪಾಲಾಗಿರುವ ಈ ಕಾರ್ಮಿಕರು ಮತ್ತೊಂದು ಊರಿಗೆ ತೆರಳಲು ಪರದಾಡುತ್ತಿದ್ದಾರೆ. ಈ ನಡುವೆ, ರಾಜಸ್ತಾನದಿಂದ ಉತ್ತರ ಪ್ರದೇಶದ ಹಳ್ಳಿಗಳಿಗೆ ಟ್ರಕ್’ನಲ್ಲಿ ಮರಳುತ್ತಿದ್ದ ಬಡಪಾಯಿ ಕಾರ್ಮಿಕರು ಅಪಘಾತದ ಭೀಕರತೆಯನ್ನು ಎದುರಿಸಬೇಕಾಯಿತು.
ಇಂದು ಮುಂಜಾನೆ ಲಕ್ನೋ ಸಮೀಪದ ಔರೈಯಾ ಬಳಿ ಈ ಕಾರ್ಮಿಕರಿದ್ದ ಟ್ರಕ್ ಮತ್ತೊಂದು ಲಾರಿಗೆ ಡಿಕ್ಕಿಯಾಗಿದೆ. ಮುಂಜಾನೆ 3.30ರ ಸುಮಾರಿಗೆ ಸಂಭವಿಸಿದ ಈ ಅಪಘಾತದಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 20 ಮಂದಿ ಗಾಯಗೊಂಡಿದ್ದಾರೆ. ಈ ದುರ್ದೈವಿ ಕಾರ್ಮಿಕರು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಮೂಲದವರೆಂದು ಹೇಳಲಾಗುತ್ತಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ.. ಡಾನ್ ಮುತ್ತಪ್ಪ ರೈ ತಲೆ ತಗ್ಗಿಸಿದ್ದು ಈ ಖಡಕ್ ಅಧಿಕಾರಿಯ ಮಾತಿಗೆ ಮಾತ್ರ