ಕೊರೋನಾ ಸಂದರ್ಭದಲ್ಲಿ ದೇಶದ ಜನ ಸಂಕಷ್ಟದಲ್ಲಿದ್ದಾರೆ. ಬ್ಯಾಂಕ್ ವ್ಯವಹಾರ ಕುರಿತು ಸಾಕಷ್ಟು ಗೊಂದಲದಲ್ಲೂ ಇದ್ದಾರೆ. ಬ್ಯಾಂಕ್ ಎಲ್ಲೋ ಇದೆ. ಗ್ರಾಹಕರು ಇನ್ನೆಲ್ಲೂ ಇರ್ತಾರೆ. ಲಾಕ್ ಡೌನ್ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ವ್ಯವಹಾರ ಮೇಲಿನ ಶುಲ್ಕವನ್ನು ಮನ್ನಾ ಮಾಡಿದೆ.
ಒಂದು ಬ್ಯಾಂಕಿನ ಗ್ರಾಹಕರು ಇತರ ಬ್ಯಾಂಕ್’ನ ಎಟಿಎಂ ಸೆಂಟರ್’ನಲ್ಲಿ ನಿಗದಿಗಿಂತ ಹೆಚ್ಚು ಬಾರಿ ಹಣ ಡ್ರಾ ಮಾಡಿದರೆ ಶುಲ್ಕ ವಿಧಿಸಲಾಗುತ್ತದೆ. ಆದರೆ ಇದೀಗ ಕೊರೋನಾ ಸಂಕಷ್ಟ ಕಾಲದಲ್ಲಿ ತನ್ನ ಗ್ರಾಹಕರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಎಸ್ಬಿಐ ಹೊಸ ನಿಯಮ ಜಾರಿಮಾಡಿದೆ.
ಸಾಮಾನ್ಯ ನಿಯಮದಂತೆ ಎಸ್ಬಿಐ ಗ್ರಾಹಕರು ತನ್ನ ಖಾತೆಯಿರುವ ಬ್ಯಾಂಕ್ ಎಟಿಎಂನಲ್ಲಿ ಪ್ರತೀ ತಿಂಗಳು ಐದು ಬಾರಿ ಹಾಗೂ ಇತರೆ ಬ್ಯಾಂಕ್ನ ಎಟಿಎಂಗಳಲ್ಲಿ ಮೂರು ಬಾರಿ ಹಣ ತೆಗೆಯಲು ಅವಕಾಶ ಇದೆ. ಹೆಚ್ಚುವರಿ ಬಳಕೆ ಮಾಡಿದಲ್ಲಿ ದಂಡ ವಿಧಿಸಲಾಗುತ್ತಿತ್ತು.
ಕೋವಿಡ್ ವೈರಸ್ ನ ಈ ತುರ್ತುಪರಿಸ್ಥಿತಿಯ ಹಿನ್ನೆಲೆಯಲ್ಲಿ, ತನ್ನ ಗ್ರಾಹಕರು ಇತರೆ ಬ್ಯಾಂಕ್ಗಳ ಎಟಿಎಂಗಳಲ್ಲಿ ವ್ಯವಹಾರ ನಡೆಸಿದರೆ, ಅದಕ್ಕೆ ಯಾವುದೇ ದಂಡ ಶುಲ್ಕಗಳು ಇರುವುದಿಲ್ಲ ಎಂದು ಎಸ್ಬಿಐ ಹೇಳಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಬ್ಯಾಂಕುಗಳು ಎಟಿಎಂ ವಹಿವಾಟುಗಳಿಗೆ ದಂಡ ಶುಲ್ಕವನ್ನು ಪಡೆಯುವಂತಿಲ್ಲ ಎಂದು ವಿತ್ತ ಸಚಿವರು ನೀಡಿರುವ ಸೂಚನೆಯನ್ನು ಗೌರವಿಸಿರುವ ಎಸ್ಬಿಐ ಈ ನಿರ್ಣಯಕ್ಕೆ ಬಂದಿದೆ. ಜೂನ್ ತಿಂಗಳಾಂತ್ಯದವರೆಗೆ ಯಾವುದೇ ಎಟಿಎಂ ಶುಲ್ಕ ಇರುವುದಿಲ್ಲ.