‘ಭೋಜರಾಜ್ MBBS’ ಕ್ಲೈಮ್ಯಾಕ್ಸ್; ಹಾಸ್ಯರತ್ನ ಕಂಪೌಂಡರ್ ಬಗ್ಗೆ ಕುತೂಹಲ ಏಕೆ ಗೊತ್ತಾ?

ಲಾಕ್’ಡೌನ್ ಕಾರಣದಿಂದಾಗಿ ಮೌನ ಆವರಿಸಿದ್ದ ಚಿತ್ರರಂಗದಲ್ಲಿ ಇದೀಗ ಹೊಸ ಕನಸುಗಳು ಚಿಗುರಿವೆ. ಅದರಲ್ಲೂ ಕೋಸ್ಟಲ್’ವುಡ್ ಪಾಳಯದಲ್ಲಿ ತೆರೆಮೆರೆ ಕಸರತ್ತು ಆರಂಭವಾಗಿದೆ. ಹಾಸ್ಯಪ್ರಧಾನ ಮೂವೀಗಳೇ ಹೆಚ್ಚಿರುವ ತುಳು ಸಿನಿಮಾ ಪೈಕಿ ಹೊಸ ಚಿತ್ರಗಳು ಬಿಡುಗಡೆಯಾಗಿ ತಿಂಗಳುಗಳೇ ಕಳೆದಿವೆ. ಬಹುಷಃ ಲಾಕ್’ಡೌನ್ ಜಾರಿಗೆ ಬರದಿದ್ದರೆ ಇಷ್ಟೊತ್ತಿಗಾಗಲೇ ಹಲವು ಸಿನಿಮಾಗಳು ತೆರೆ ಮೇಲೆ ಅಬ್ಬರಿಸುತ್ತಿದ್ದವು.

ಈ ನಡುವೆ ಬಹು ನಿರೀಕ್ಷೆಯ ‘ಭೋಜರಾಜ್ MBBS’ ಸಿನಿಮಾ ಕ್ಲೈಮ್ಯಾಕ್ಸ್ ಘಟ್ಟದಲ್ಲಿದೆ. ಬಹುಪಾಲು ಚಿತ್ರೀಕರಣ ಮುಗಿಸಿ ಲಾಕ್’ಡೌನ್’ನಿಂದಾಗಿ ಸಣ್ಣದೊಂದು ಬ್ರೇಕ್ ಪಡೆದಿರುವ ತುಳುವರ ಬಹು ನಿರೀಕ್ಷೆಯ ಈ ಚಿತ್ರ ಕುಡ್ಲ ಸಿನೆಮಾ ನಿರ್ಮಾಣದಲ್ಲಿ ತಯಾರಾಗುತ್ತಿದೆ. ನವರಸರಾಜೆ ಭೋಜರಾಜ ವಾಮಂಜೂರು ಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಪತ್ರಕರ್ತ ಇಸ್ಮಾಯಿಲ್ ಮೂಡುಶೆಡ್ಡೆ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ.
‘ಭೋಜರಾಜ್ MBBS’ ಸಿನಿಮಾ ಟೈಟಲ್ ಗಮನಿಸಿದರೆ ನಟ ಭೋಜರಾಜ್ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆಂಬುದು ಸ್ಪಷ್ಟವಾಗುತ್ತದೆ. ಆದರೆ ಇದರಲ್ಲಿ ಜನಮನ ರಂಜಿಸುವುದು ಕಾಂಪೌಂಡರ್ ಪಾತ್ರ.


ಡಾಕ್ಟರ್ ಅಂದ ಮೇಲೆ ಅಲ್ಲೊಬ್ಬ ಕಂಪೌಂಡರ್ ಅತ್ಯಗತ್ಯ . ಈ ಚಿತ್ರದಲ್ಲಿ ಭೋಜರಾಜ್ ಅವರು ಡಾಕ್ಟರ್ ಆಗಿ ರಂಜಿಸಿದರೆ ಅವರಿಗೆ ಕಾಂಪೌಂಡರ್ ಆಗಿ ಸಾಥ್ ನೀಡಿರುವ ಕಲಾವಿದ ಯಾರಿರಬಹುದು ಎಂಬ ಊಹೆ ಕೋಸ್ಟಲ್ ವುಡ್ ಮಂದಿಯದ್ದು. ಅರವಿಂದ್ ಬೋಳಾರ್ ಮೂರು ವಿಭಿನ್ನ ಗೆಟಪ್’ನಲ್ಲಿ ಕಾಣಿಸಿಕೊಳ್ಳಲಿದ್ದು, ಅವರೇ ಕಂಪೌಂಡರ್ ಇರಬಹುದೇ ಎಂಬ ಬಗ್ಗೆ ಕುತೂಹಲವಿದೆ. ಆದರೆ ಆ ಪಾತ್ರವನ್ನು ನಿರ್ವಹಿಸಿರೋದು ಮತ್ತೋರ್ವ ಖ್ಯಾತ ಹಾಸ್ಯ ಕಲಾವಿದ ಸಾಯಿಕೃಷ್ಣ ಕುಡ್ಲ. ತುಳು ನಾಟಕ ಮತ್ತು ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ಸಾಯಿಕೃಷ್ಣ ಕುಡ್ಲ ಸಿನಿಮಾದ ಆರಂಭದಿಂದ ಅಂತ್ಯದವರೆಗೂ ಮೋಡಿ ಮಾಡುತ್ತಾರೆ. ಉಮೇಶ್ ಮಿಜಾರ್, ರವಿ ರಾಮಕುಂಜ ಮೊದಲಾದವರು ಕೂಡ ಪ್ರೇಕ್ಷಕರನ್ನು ನಗಿಸಲಿದ್ದಾರೆ ಎಂಬ ಸುಳಿವನ್ನು ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಹೇಳಿದ್ದಾರೆ.


ಸಾಯಿಕೃಷ್ಣ ಕುಡ್ಲ ಈಗಾಗಲೇ ಕನ್ನಡದಲ್ಲಿ ‘ಚೆಲ್ಲಾಪಿಲ್ಲಿ’ ಹಾಗೂ ತುಳುವಿನಲ್ಲಿ ‘ಸೂಂಬೆ’ ಎಂಬೆರಡು ಚಿತ್ರಗಳನ್ನು ನಿರ್ದೇಶಿಸಿ ಯಶಸ್ಸು ಕಂಡವರು ತುಳುನಾಡಿನ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ದೇವದಾಸ್ ಕಾಪಿಕಾಡ್ ಅವರ ಬೊಳ್ಳಿ ಮೂವೀಸ್ ಈ ಬ್ಯಾನರಿನ ಪ್ರತಿ ಚಿತ್ರದಲ್ಲೂ ಪ್ರಮುಖ ಹಾಸ್ಯ ಕಲಾವಿದರಾಗಿ ಸಾಯಿಕೃಷ್ಣ ಕುಡ್ಲ ಕಾಣಿಸಿಕೊಂಡಿದ್ದರು. ಇದೀಗ ‘ಭೋಜರಾಜ್  MBBS’ ಚಿತ್ರದಲ್ಲಿ ಹಾಸ್ಯ ರತ್ನಗಳ ಕೆಮಿಸ್ಟ್ರಿ ಯಾವ ಮಟ್ಟದಲ್ಲಿರಬಹುದೆಂಬುದೇ ಕುತೂಹಲ.

ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಈ ಚಿತ್ರದಲ್ಲಿ ಮೂರು ವಿಭಿನ್ನ ಗೆಟಪ್’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಬಹುದು. ಶೀತಲ್ ನಾಯಕ್ , ನವ್ಯ ಪೂಜಾರಿ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರೋನ್ಸ್ ಲಂಡನ್, ಪ್ರಾಣ್ ಶೆಟ್ಟಿ, ಪರ್ವೇಜ್ ಬೆಳ್ಳಾರೆ , ಪ್ರಭಾ ಸುವರ್ಣ , ನಾರಾಯಣ ಸುವರ್ಣ ಮೊದಲಾದವರು ತೆರೆ ಹಂಚಿಕೊಂಡಿದ್ದಾರೆ. ವಿಜಯಕುಮಾರ್ ಕೊಡಿಯಾಲ್ ಬೈಲ್ ಕೂಡಾ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡದಲ್ಲಿ ‘ಬಣ್ಣ ಬಣ್ಣದ ಬದುಕು’, ತುಳುವಿನಲ್ಲಿ ‘ಪಮ್ಮಣ್ಣ ದಿ ಗ್ರೇಟ್’ ಎಂಬೆರಡು ಎಮೋಷನಲ್ ಸೆಂಟಿಮೆಂಟ್ ಸಬ್ಜೆಕ್ಟ್ ಚಿತ್ರವನ್ನು ನಿರ್ದೇಶಿಸಿದ ಸೃಜನಶೀಲ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಈ ಪಕ್ಕಾ ಕಾಮಿಡಿ ಚಿತ್ರಕ್ಕೆ ಕೈ ಹಾಕಿದ್ದಾರೆ. ‘ಭೋಜರಾಜ್ ಎಂಬಿಬಿಎಸ್’ ಕುಟುಂಬ ಸಮೇತ ನೋಡುವ ಆರೋಗ್ಯಪೂರ್ಣ ಹಾಸ್ಯ ಚಿತ್ರವಾಗಿದ್ದು, ಈ ಸಿನಿಮಾಕ್ಕೆ ಇದೀಗ ಅಂತಿಮ ಸ್ಪರ್ಶ ಸಿಗುತ್ತಿದೆ ಎಂದು ನಿರ್ದೇಶಕ ಇಸ್ಮಾಯಿಲ್ ಅವರು ಈ ಸಿನಿಕಥನವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ.. ಇಬ್ಬರು ಗೆಳತಿಯರ ನಡುವೆ ಭೋಜರಾಜ್ ಬ್ಯುಸಿ 

 

Related posts