ಬೀದರ್ : ಕೊರೊನಾ ವೈರಸ್ ನಿಂದಾಗಿ ಲಾಕ್ ಡೌನ್ ಉಂಟಾದ ಪರಿಣಾಮ ಶಾಲಾ – ಕಾಲೇಜುಗಳು ಬಂದ್ ಆಗಿದ್ದು, ಆನ್ ಲೈನ್ ಕ್ಲಾಸ್ ನಡೆಸಲು ಶಿಕ್ಷಣ ಸಂಸ್ಥೆಗಳು ಮುಂದಾಗಿವೆ. ಸರ್ಕಾರ ಇದಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಬೇಕಿದೆ. ಹಾಗಾಗಿ ಸರ್ಕಾರ ಕನಿಷ್ಟ ಪಕ್ಷ ಹೈಸ್ಕೂಲ್ ವಿದ್ಯಾರ್ಥಿಗಳಿಗಾದರೂ ಸ್ಮಾರ್ಟ್ ಫೋನ್ ಒದಗಿಸಿಕೊಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಖಾಶೆಂಪುರ್ ರವರು ಸಿ.ಎಂ ಬಿಎಸ್ವೈಗೆ ಮನವಿ ಮಾಡಿದ್ದಾರೆ.
ಸರ್ಕಾರ ಜಾರಿಗೊಳಿಸಿರುವ ಆನ್ ಲೈನ್ ಶಿಕ್ಷಣದ ಸಾಧಕ – ಭಾದಕಗಳ ಕುರಿತು ಬುಧವಾರ ಬೀದರ್ ಜಿಲ್ಲೆ ಕಮಠಾಣಾ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕರೊಂದಿಗೆ ಸಭೆ ನಡೆಸಿದ ಶಾಸಕರು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಆನ್ ಲೈನ್ ಕ್ಲಾಸ್ ಜಾರಿಗೊಳಿಸಲು ಶಿಕ್ಷಣ ಇಲಾಖೆ ಯಾವ ರೀತಿ ಸಿದ್ದತೆ ಮಾಡಿಕೊಂಡಿದೆ. ಯಾವ ರೀತಿಯ ಸಿದ್ದತೆ ಮಾಡಿಕೊಳ್ಳಬೇಕಾಗಿದೆ ಎಂಬ ಸಲಹೆ ನೀಡಿದರು. ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಪೋನ್ ಖರೀದಿಸಲು ಕಷ್ಟವಾಗಲಿದ್ದು, ಸರ್ಕಾರವೇ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಪೋನ್ ಒದಗಿಸಿಕೊಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದರು.