ಈ ಬಾರಿ ಹೆಚ್ಚು ಯೂರಿಯಾ ರಸಗೊಬ್ಬರ ಪೂರೈಕೆ: ಕೃಷಿ ಸಚಿವರ ಭರವಸೆ

ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರಕ್ಕೆ ಯಾವುದೇ ಕೊರತೆಯಾಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸಿ, ಅಗತ್ಯ ಪ್ರಮಾಣದಷ್ಟು ರಸಗೊಬ್ಬರವನ್ನು ಈಗಾಗಲೇ ರಾಜ್ಯಗಳಿಗೆ ಪೂರೈಸಿ, ದಾಸ್ತಾನು ಮಾಡಲಾಗಿದೆ. ಯಾವುದೇ ಕೊರತೆಯಾಗದಂತೆ ಕ್ರಮವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

2020-21 ನೇ ಸಾಲಿನ ಮುಂಗಾರು ಹಂಗಾಮಿನ ಏಪ್ರಿಲ್ 1 ರಿಂದ ಜುಲೈ 6 2020ರವರೆಗೆ ಯೂರಿಯಾ ರಸಗೊಬ್ಬರಕ್ಕೆ 4,98,000 ಮೆಟ್ರಿಕ್ ಟನ್ ಬೇಡಿಕೆ ಇದ್ದು, 4,35,700 ಮೆ.ಟನ್ ಸರಬರಾಜಾಗಿದ್ದು 2,06,750 ಮೆ.ಟನ್ ದಾಸ್ತಾನು ಇದ್ದು,ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಸುಮಾರು 1,55,468 ಮೆಟ್ರಿಕ್ ಟನ್ ಹೆಚ್ಚುವರಿ ಈ ಬಾರಿ ಯೂರಿಯಾ ರಸಗೊಬ್ಬರ ಪೂರೈಕೆಯಾಗಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ಸುಮಾರು 2,06, 740 ಟನ್ ದಾಸ್ತಾನು ಇದೆ ಎಂದವರು ಹೇಳಿದ್ದಾರೆ.

ಮೇ ಮತ್ತು ಜೂನ್ ಅವಧಿಯಲ್ಲಿ ದೇಶಾದ್ಯಂತ ನಿರೀಕ್ಷೆಗಿಂತ ಉತ್ತಮ ಮಳೆಯಾಗಿದ್ದರಿಂದ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಬೇಡಿಕೆ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ.ಹೆಚ್ಚುವರಿಯಾಗಿ ರಸಗೊಬ್ಬರಕ್ಕೆ ಯಾವುದೇ ಬೇಡಿಕೆ ಎದುರಾದರೂ ಇಲಾಖೆ ಪೂರೈಸಲಿದೆ ಎಂದು ಕೃಷಿ ಸಚಿವರು ಭರವಸೆ ನೀಡಿದ್ದಾರೆ.

Related posts