ಮಹಾರಾಷ್ಟ್ರ ಸಿಎಂ ಆಗಿ ದೇವೆಂದ್ರ ಫಡ್ನವೀಸ್ ಪ್ರಮಾಣ

ಮುಂಬಯಿ: ಮಹಾರಾಷ್ಟ್ರ ರಾಜಕಾರಣಕ್ಕೆ ಕ್ಲೈಮ್ಯಾಕ್ಸ್ ಘಟ್ಟದಲ್ಲೇ ತಿರುವು ಸಿಕ್ಕಿದೆ. ಸುಮಾರು ಒಂದು ತಿಂಗಳ ರಾಜಕೀಯ ಹಗ್ಗಜಗ್ಗಾಟದ ನಂತರ ಮಹಾರಾಷ್ಟ್ರದ ಸಿಎಂ ಆಗಿ ದೇವೆಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಎನ್ ಸಿಪಿಯ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇಂದು ಬೆಳಿಗ್ಗೆ 8.05ಕ್ಕೆ ನಡೆದ ತರಾತುರಿಯಲ್ಲಿ ಕಾರ್ಯಕ್ರಮದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಪ್ರಮಾಣ ವಚನ ಬೋಧಿಸಿದರು. ಈ ಮೂಲಕ ಬಿಜೆಪಿ ಹಾಗೂ ಎನ್‌ಸಿಪಿ ನಾಯಕರು ರಾಷ್ಟ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾದರು.

ಕಾಂಗ್ರೆಸ್ ಮತ್ತು ಶಿವಸೇನೆ ಜೊತೆ ಕಾಣಿಸಿಕೊಂಡಿದ್ದ ಶರದ್ ಪವಾರ್ ನೇತೃತ್ವದ ಎನ್ ಸಿಪಿ ರಾತ್ರಿ ಬೆಳಗಾಗುವುದರೊಳಗೆ ಬಿಜೆಪಿ ಜೊತೆ ಕಾಣಿಸಿಕೊಂಡ ನಿರ್ಧಾರವಂತೂ ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಸಾಕ್ಷಿಯಾಯಿತು.

ಮಹಾ ರೋಚಕತೆ ಹೇಗಿತ್ತು ಗೊತ್ತಾ?

ಆಚಾರಿಯ ಬೆಳವಣಿಗೆಯಲ್ಲಿ ಶನಿವಾರದವರೆಗೂ ಶಿವಸೇನೆ ಜೊತೆ ಮೈತ್ರಿಗೆ ನಿರ್ಧರಿಸಿ ಉದ್ಧವ್ ಠಾಕ್ರೆಗೆ ಪಟ್ಟ ಕಟ್ಟಲು ತಂತ್ರಗಾರಿಕೆ ಹೆಣೆದಿದ್ದ ಎನ್‌ಸಿಪಿ ನಾಯಕ ಶರದ್ ಪವಾರ್ ಕೊನೆ ಸ್ವಶನದಲ್ಲಿ ಬಿಜೆಪಿ ಜೊತೆ ಹೋಗುವ ಮನಸು ಮಾಡಿತು. ಹಾಗಾಗಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿತು.
ಶುಕ್ರವಾರ ಎನ್‌ಸಿಪಿ-ಕಾಂಗ್ರೆಸ್‌-ಶಿವಸೇನೆ ನಾಯಕರು ನಡೆಸಿದ ಸಭೆಯಲ್ಲಿ ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ನೀಡಲು ನಿರ್ಧರಿಸಲಾಗಿತ್ತು. ಬಿಜೆಪಿ ಜೊತೆಗಿನ ಸಖ್ಯ ತೊರೆದಿರುವ ಶಿವಸೇನೆ ಕಾಂಗ್ರೆಸ್ ಸಂಗಾತಿಗಳ ಜೊತೆ ಸೇರಿಕೊಂಡಿದ್ದು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಶಿವಸೇನೆಗೆ ಪಟ್ಟ ಕಟ್ಟಲು ಈ ಪಕ್ಷಗಳು ತೀರ್ಮಾನಿಸಿತ್ತು. ಶಿವಸೇನೆಗೆ ಮುಖ್ಯಮಂತ್ರಿ ಹುದ್ದೆ ಸೇರಿ 16 ಸಚಿವ ಸ್ಥಾನಗಳು ಸಿಗಲಿದೆ. ಎನ್‌ಸಿಪಿಗೆ 14, ಕಾಂಗ್ರೆಸ್‌ಗೆ 12 ಸಚಿವ ಸ್ಥಾನಗಳ ಹಂಚಿಕೆಯ ಬಗ್ಗೆ ಸಹಮತ ವ್ಯಕ್ತವಾಗಿತ್ತು. ಈ ಮೂಲಕ ಶಿವಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಗೇರುವುದು ನಿಚ್ಚಳ ಎಂದೇ ಭಾವಿಸಲಾಗಿತ್ತು.

ಆದರೆ ಕ್ಲೈಮ್ಯಾಕ್ಸ್ ಆಗಿದ್ದೆ ಬೇರೆ. ಶಿವಸೇನೆಗೆ ಪಟ್ಟ ಕಟ್ಟಲು ನಡೆದ ತೀರ್ಮಾನದ ಕೆಲವೇ ಗಂಟೆಗಳಲ್ಲಿ ಎನ್‌ಸಿಪಿ ತನ್ನ ನಿಲುವನ್ನು ಬದಲಿ, ಬಿಜೆಪಿ ಜೊತೆ ಹೋಗುವ ಮನಸ್ಸು ಮಾಡಿತು.

288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಹೊಂದಿದೆ. ಶಿವಸೇನೆ 56 ಸ್ಥಾನಗಳನ್ನು ಹೊಂದಿದ್ದರೆ, ಎನ್‌ಸಿಪಿ 54 ಕಾಂಗ್ರೆಸ್‌ 44 ಶಾಸಕ ಬಲ ಹೊಂದಿವೆ. ೨೯ ಮಂದಿ ಇತರರೂ ಬಹುಮತವನ್ನು ನಿರ್ಧರಿಸಲಿದ್ದಾರೆ.

Related posts