ಬೆಂಗಳೂರು: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಬಿಜೆಪಿ ವರಿಷ್ಠರ ಬಗ್ಗೆ ಮುನಿಸಿಕೊಂಡಿದ್ದಾರ? ಕಮಲ ಪಕ್ಷವನ್ನು ತೊರೆಯುವ ರೀತಿ ಸಂಕಟದ ಪರಿಸ್ಥಿತಿಯಲ್ಲಿದ್ದಾರ? ಈ ಕುರಿತ ಚರ್ಚೆಯೊಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಕೆಲ ಸಮಯದ ಹಿಂದೆ, ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ಬಗ್ಗೆ ಮುನಿಸಿಕೊಂಡಿದ್ದ ಹಿರಿಯ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಮಲಕ್ಕೆ ಗುಡ್ ಬೈ ಹೇಳಿ ‘ಕೈ’ ಹಿಡಿದಿದ್ದರು. ಇದೀಗ ಅದೇ ರೀತಿಯ ವೇದನೆಯನ್ನು ನಿಕಟಪೂರ್ವ ಸಿಎಂ ಬಸವರಾಜ್ ಬೊಮ್ಮಾಯಿ ಕೂಡಾ ಅನುಭವಿಸುತ್ತಿದ್ದಾರೆಂಬ ಮಾತುಗಳು ರಾಜಕೀಯವಲಯದಲ್ಲಿ ಪ್ರತಿಧ್ವನಿಸಿದೆ. ‘ತಾನು ಬಿಜೆಪಿಯಲ್ಲಿರಲು ಸಾಧ್ಯವಿಲ್ಲ’ ಎಂದು ಬೊಮ್ಮಾಯಿ ಅವರು ಖಾಸಗಿಯಾಗಿ ಹೇಳಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಪ್ರದೇಶ ಕಾಂಗ್ರೆಸ್ ಪಕ್ಷದ ಮುಖಂಡ ರಮೇಶ್ ಬಾಬು ಬಯಲು ಮಾಡಿದ್ದಾರೆ.
Live with OneStream Live. https://t.co/2NParmSIYz
— Karnataka Congress (@INCKarnataka) August 2, 2023
ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಅವರು ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ನಾಯಕರ ಅಸಹಾಯಕತೆ ಬಗ್ಗೆ ಕಾಟು ಟೀಕೆ ಮಾಡಿದರು. ಉನ್ನತ ಹುದ್ದೆಯಲ್ಲಿದ್ದ ನಾಯಕರು ಪದವಿ ಕಳೆದುಕೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಪ್ರತಿಪಕ್ಷ ನಾಯಕರ ಸ್ಥಾನ ಬಗ್ಗೆ ಕಣ್ಣಿಟ್ಟಿರುವ ಅನೇಕರು ತಮ್ಮ ಕನಸುಗಳು ಈವರೆಗೂ ಈಡೇರದ ಕಾರಣ ನಿರಾಶರಾಗಿದ್ದಾರೆ. ಅದರಲ್ಲೂ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಯವರು ತೀರಾ ವೇದನೆ ಅನುಭವಿಸುತ್ತಿದ್ದಾರೆ ಎಂದು ಬಣ್ಣಿಸಿದರು. ಬೊಮ್ಮಾಯಿ ಅವರು ‘ತಾನು ಬಿಜೆಪಿಯಲ್ಲಿರಲು ಸಾಧ್ಯವಿಲ್ಲ’ ಎಂದು ಖಾಸಗಿಯಾಗಿ ಹೇಳಿಕೊಂಡಿದ್ದಾರೆ ಎಂಬ ಸಂಗತಿಯನ್ನೂ ರಮೇಶ್ ಬಾಬು ಬಹಿರಂಗಪಡಿಸಿದರು. ಬೊಮ್ಮಾಯಿ ಅವರು ಖಾಸಗಿಯಾಗಿ ಯಾರ ಬಳಿ ಹೇಳಿಕೊಂಡಿದ್ದಾರೆ ಎಂಬ ವಿಚಾರವನ್ನು ಬರುವ ದಿನಗಳಲ್ಲಿ ಹೇಳುವುದಾಗಿ ತಿಳಿಸಿ ಬಿಜೆಪಿಯಲ್ಲಿನ ಒಟ್ಟಾರೆ ಬೆಳವಣಿಗೆ ಬಗ್ಗೆ ಕುತೂಹಲ ಹೆಚ್ಚಿಸುವಂತೆ ಮಾಡಿದರು.