ಬೆಂಗಳೂರು: ರಾಜಧಾನಿ ನಗರಿ ಜನರ ಹೆಮ್ಮೆಯ ಸಾರಿಗೆ ಸಂಸ್ಥೆ ‘ಬಿಎಂಟಿಸಿ’ಗೆ ಇದೀಗ ರಜತ ಮಹೋತ್ಸವ ಸಂಭ್ರಮ.. ನಿಗಮದ ನೌಕರ ವೃಂದದಲ್ಲೂ ಎಂದಿಲ್ಲದ ಸಡಗರ. ಇದೇ ಸಂದರ್ಭದಲ್ಲಿ ನಡೆದ ಅನನ್ಯ ಕ್ರೀಡಾಕೂಟ ಈ ಸಂಭ್ರಮೋತ್ಸಾಹವನ್ನು ನೂರ್ಮಡಿಗೊಳಿಸಿತು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಸಂಸ್ಥೆಯ ಸಮಸ್ತ ಸಿಬ್ಬಂದಿಗೆ BGS ಕ್ರೀಡಾoಗಣ ಬೆಂಗಳೂರಿನಲ್ಲಿ ಆಗಸ್ಟ್ 2 ಮತ್ತು 3ರಂದು ವಿಶೇಷ ಕ್ರೀಡಾಕೂಟ ಆಯೋಜಿಸಲಾಗಿತ್ತು. ಅಧಿಕಾರಿಗಳು, ನೌಕರರು ಒಗ್ಗೂಡಿ ಆಡಿದ ಸ್ಪರ್ಧೆಗಳು ಸಾಮರಸ್ಯದ ಕ್ಷಣಗಳಿಗೆ ಸಾಕ್ಷಿಯಂತಿತ್ತು. ಅಧಿಕಾರಿಗಳು, ನೌಕರರಷ್ಟೇ ಅಲ್ಲ, ಸ್ವತಃ ಸಾರಿಗೆ ಸಚಿವರೂ ಈ ಅನನ್ಯ ಹಾಗೂ ಅಪೂರ್ವ ಸನ್ನಿವೇಶವನ್ನು ಸಾಕ್ಷೀಕರಿಸಿದರು.
45 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ಕೆಳಗಿನವರ ವರ್ಗದಲ್ಲಿ ಕ್ರೀಡಾಕೂಟ:
ಮಹಿಳೆಯರಿಗೆ ಖೋ ಖೋ, ಥ್ರೋ ಬಾಲ್ ಹಾಗೂ 75 ಮೀಟರ್ ಓಟದ ಸ್ಪರ್ಧೆ ಮತ್ತು ಪುರುಷ ವಿಭಾಗದಲ್ಲಿ ಕಬಡ್ಡಿ, ಕ್ರಿಕೆಟ್, 100 ಮೀಟರ್ ಓಟ, ಶಾಟ್ಪುಟ್ ಸ್ಪರ್ಧೆ ಗಮನಸೆಳೆಯಿತು.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರೂ ಕ್ರಿಕೆಟ್ ಆಡುವ ಮೂಲಕ ಸಿಬ್ಬಂದಿ ಸಮೂಹಕ್ಕೆ ಸ್ಫೂರ್ತಿ ತಂದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ ಹಾಗೂ ನಿಗಮದ ಅಧಿಕಾರಿಗಳು ಕಬಡ್ಡಿ ಹಾಗೂ ಕ್ರಿಕೆಟ್ ಸ್ಪರ್ಧಿಗಳನ್ನು ಹುರಿದುಂಭಿಸಿದ ಸನ್ನಿವೇಶಕ್ಕೂ ಈ ಕ್ರೀಡಾ ಆಖಾಡ ಸಾಕ್ಷಿಯಾಯಿತು.
ಎರಡು ದಿನಗಳ ನಡೆದ ಕ್ರೀಡಾ ಕೂಟದಲ್ಲಿ ಬಿಎಂಟಿಸಿ ಪೂರ್ವ ವಲಯ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು. ವಿಜೇತರಿಗೆ ಸಚಿವರು ಬಹುಮಾನಗಳನ್ನು ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ಸಚಿವ ರಾಮಲಿಂಗ ರೆಡ್ಡಿ, ಸಾರಿಗೆ ಸಂಸ್ಥೆಯ ಚಾಲಕ ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ತಮ್ಮ ಒತ್ತಡ ಕೆಲಸದ ನಡುವೆಯೂ ಈ ರೀತಿಯ ಕ್ರೀಡೆಗಳಲ್ಲಿ ಅತೀ ಉತ್ಹಾಹದಿಂದ ಭಾಗವಹಿಸಿರುವುದು ಹೆಮ್ಮೆಯ ವಿಷಯ ಎಂದರು.
800 ಕ್ಕೂ ಹೆಚ್ಚು ನೌಕರರು ಈ ಅಪೂರ್ವ ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದಾರೆ. ಈ ರೀತಿಯ ಕಾರ್ಮಿಕ ಸ್ನೇಹಿ ಕಾರ್ಯಕ್ರಮಗಳು ಸಾರಿಗೆ ಸಂಸ್ಥೆಯಲ್ಲಿ ಮತ್ತಷ್ಟು ಕ್ರಿಯಾತ್ಮಕತೆಯನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.