ಬೆಂಗಳೂರು: ಆಪರೇಷನ್ ಕಮಲದಿಂದ ತೆರವಾಗಿದ್ದ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಮತದಾರರು ಬಿಜೆಪಿಯ ಕೈ ಹಿಡಿದಿದ್ದಾರೆ. ೧೫ ಕ್ಷೇತ್ರಗಳ ಪೈಕಿ ಬಿಜೆಪಿ ೧೨ ಸ್ಥಾನಗಳಲ್ಲಿ ಗೆದ್ದರೆ, ಕಾಂಗ್ರೆಸ್ ೨ ಕ್ಷೇತ್ರಗಳಲ್ಲಿ ಗೆದ್ದಿದೆ. ಒಂದು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ವಿಜಯಿಯಾಗಿರೋದು ವಿಶೇಷ.
ಯಡಿಯೂರಪ್ಪ ಸರ್ಕಾರ ಸೇಫ್ ಆಗಿರಬೇಕಿದ್ದರೆ ಬಿಜೆಪಿ ಕನಿಷ್ಟ 9 ಸ್ಥಾನಗಳನ್ನಾದರೂ ಗೆಲ್ಲಲೇಬೇಕಿತ್ತು. ಕೊನೆಗೂ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಮಲ ಪಾಳಯ ಜಯಭೇರಿ ಬಾರಿಸಿದೆ.
ಶಾಸಕರ ಅನರ್ಹತೆಯ ತೀಪಿನಿಂದಾಗಿ ತೆರವಾಗಿದ್ದ 15 ಕ್ಷೇತ್ರಗಳಿಗೆ ಡಿಸೆಂಬರ್ 05 ರಂದು ಉಪ ಚುನಾವಣೆ ನಡೆದಿತ್ತು. ಬೆಳಗಾವಿಯ ಗೋಕಾಕದಲ್ಲಿ ರಮೇಶ್ ಜಾರಕಿಹೊಳಿ, ಅಥಣಿಯಲ್ಲಿ ಮಹೇಶ್ ಕುಮಟಳ್ಳಿ, ಹಿರೇಕೆರೂರಿನಲ್ಲಿ ಬಿ.ಸಿ. ಪಾಟೀಲ್, ಕಾಗವಾಡದಲ್ಲಿ ಶ್ರೀಮಂತ ಪಾಟೀಲ್, ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್, ರಾಣಿಬೆನ್ನೂರಿನಲ್ಲಿ ಅರುಣ್ ಕುಮಾರ್ ಪೂಜಾರ, ವಿಜಯನಗರದಲ್ಲಿ ಆನಂದ್ ಸಿಂಗ್, ಕೆ.ಆರ್. ಪುರದಲ್ಲಿ ಭೈರತಿ ಬಸವರಾಜು, ಯಶವಂತಪುರದಲ್ಲಿ ಎಸ್.ಟಿ ಸೋಮಶೇಖರ್, ಕೆ.ಆರ್. ಪೇಟೆಯಲ್ಲಿ ನಾರಾಯಣ ಗೌಡ, ಮಹಾಲಕ್ಷ್ಮೀ ಲೇಔಟ್ನಲ್ಲಿ ಗೋಪಾಲಯ್ಯ, ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಗೆಲುವು ಸಾಧಿಸಿದ್ದಾರೆ.
ಶಿವಾಜಿ ನಗರ ಮತ್ತು ಹುಣಸೂರಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವಲ್ಲಿ ಸಫಲವಾಗಿದೆ. ಅನರ್ಹ ಶಾಸಕರಿಂದ ಮೂರು ಸ್ಥಾನಗಳನ್ನು ಕಳೆದುಕೊಂಡಿದ್ದ ಜೆಡಿಎಸ್ ಈ ಚುನಾವಣೆಯಲ್ಲಿ ಶೂನ್ಯ ಸಾಧನೆಗೆ ತೃಪ್ತಿಪಟ್ಟುಕೊಂಡಿದೆ. ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಸ್ಪರ್ದಿಸಿದ್ದ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಜಯಗಳಿಸಿದ್ದಾರೆ.