ರಾಜ್ಯದ ಜನತೆಗೆ ಗುಡ್ ನ್ಯೂಸ್.. ಬಸ್-ಆಟೋ-ಟ್ಯಾಕ್ಸಿ ಸೇವೆ ಆರಂಭ, ಸಲೂನ್ ಕೂಡಾ ಓಪನ್..

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್-೪ ಹೊಸ ಅವತಾರದೊಂದಿಗೆ ಆರಂಭವಾಗಿದೆ. ಈ ಬಾರಿಯ ಲಾಕ್‌ಡೌನ್ ಹೊಸ ನಿಯಮ ಹಾಗೂ ಹೊಸ ರೂಪದಲ್ಲಿ ಜಾರಿಗೆ ಬರಲಿದೆ ಎಂದು ಪ್ರಧಾನಿಯವರು ಘೋಷಿಸಿದ್ದು ಅದರಂತೆಯೇ ಪರಿವರ್ತನಾಶೀಲ ವ್ಯವಸ್ಥೆಗೆ ಸರ್ಕಾರ ಕೂಡಾ ಮುನ್ನುಡಿ ಬರೆದಿದೆ. ‌ ಅದರಂತೆ ಕಂಟೈನ್​ಮೆಂಟ್​​ ಝೋನ್​ನಲ್ಲಿ ಬಿಗಿ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಅದರ ಜೊತೆಯಲ್ಲೇ ಸುರಕ್ಷಿತ ವಲಯಗಳಲ್ಲಿ ಮಂಗಳವಾರದಿಂದ ಬಿಎಂಟಿಸಿ, ಕೆಎಸ್​ಆರ್​ಟಿಸಿ ಸೇರಿದಂತೆ ಎಲ್ಲ ಬಸ್​​ಗಳ ಓಡಾಟಕ್ಕೆ ಸರ್ಕಾರ ಅನುಮತಿ ನೀಡಿದೆ. ಜೊತೆಗೆ ರಾಜ್ಯದೊಳಗೆ ರೈಲು ಸಂಚಾರಕ್ಕೂ ಅವಕಾಶ ಇದೆ.
ಈ ಕುರಿತಂತೆ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ವಿವರ ಒದಗಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದ್ದು, ಒಂದು ಬಸ್​ನಲ್ಲಿ ಕೇವಲ 30 ಜನರಿಗೆ ಪ್ರಯಾಣ ಮಾಡುವ ಅವಕಾಶ ನೀಡಲಾಗಿದೆ. ಬಸ್‌ನಲ್ಲಿ ಪ್ರಯಾಣಿಸುವವರು ಮಾಸ್ಕ್​ ಧರಿಸದೇ ಇದ್ದರೆ ದಂಡ ವಿಧಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಿಎಂ ಸುದ್ದಿಗೋಷ್ಠಿಯ ಹೈಲೈಟ್ಸ್:

 • ಬಿಎಂಟಿಸಿ, ಕೆಎಸ್​ಆರ್​ಟಿಸಿ ಸಹಿತ ಬಸ್​​ಗಳ ಓಡಾಟಕ್ಕೆ ಅನುಮತಿ
 • ಒಂದು ಬಸ್​ನಲ್ಲಿ ಕೇವಲ 30 ಜನರಿಗೆ ಪ್ರಯಾಣ ಮಾಡುವ ಅವಕಾಶ
 • ರಾಜ್ಯದಲ್ಲಿ ಆಟೋ, ಟ್ಯಾಕ್ಸಿ ಓಡಾಟಕ್ಕೆ ಅನುಮತಿ 
 • ಬಸ್‌ನಲ್ಲಿ ಪ್ರಯಾಣಿಸುವವರು ಮಾಸ್ಕ್​ ಧರಿಸದೇ ಇದ್ದರೆ ದಂಡ 
 • ಚಾಲಕ ಸೇರಿ ಮೂವರು ಮಾತ್ರ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬಹುದು.
 • ಹೊರ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್​​ ಮುಂದುವರಿಕೆ. 
 • ಬೇರೆ ರಾಜ್ಯದಿಂದ ಅನವಶ್ಯಕವಾಗಿ ಬರಲು ಅವಕಾಶವಿಲ್ಲ
 • ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ 
 • ಮಾಲ್​​, ಸಿನಿಮಾ ಥಿಯೇಟರ್, ಹೋಟೆಲ್​ ಬಿಟ್ಟು ಉಳಿದ ಎಲ್ಲ ಅಂಗಡಿಗಳನ್ನು ತೆರೆಯಲು ಅನುಮತಿ 
 • ರಾಜ್ಯದೊಳಗೆ ಓಡಾಡಲು ರೈಲುಗಳಿಗೆ ಅವಕಾಶ 
 • ಸಲೂನ್​ ಶಾಪ್​ ತೆರೆಯಲು ಅನುಮತಿ 
 • ಬೆಳಗ್ಗೆ 7 ರಿಂದ 9 ಹಾಗೂ ಸಂಜೆ 5 ರಿಂದ 7ಗಂಟೆ ವರೆಗೆ ಎಲ್ಲ ಪಾರ್ಕ್​ಗಳಲ್ಲಿ ಓಡಾಟ ಮಾಡಲು ಅವಕಾಶ

ಇದೇ ವೇಳೆ ಪ್ರತೀ ಭಾನುವಾರ ಇಡೀ ದಿನ ಸಂಪೂರ್ಣ ​ಲಾಕ್​ಡೌನ್​ ಇರುತ್ತದೆ. ಅಂದು ಜನರ ಓಡಾಟಕ್ಕೂ ಅವಕಾಶ ಇರುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಮೇ.31ರವರೆಗೂ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಹಾಗೂ ಕೇರಳ ರಾಜ್ಯ ಜನತೆಗೆ ರಾಜ್ಯ ಪ್ರವೇಶಿಸಲು ಅವಕಾಶವಿಲ್ಲ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ.. ಜೂನ್ 25ರಿಂದ SSLC ಪರೀಕ್ಷೆ.. ಇಲ್ಲಿದೆ ವೇಳಾಪಟ್ಟಿ

 

Related posts