ಡಿ.ಕೆ.ಶಿ.ಗೆ ಕೆಪಿಸಿಸಿ ಸಾರಥ್ಯ: ಸೋನಿಯಾ ಲೆಕ್ಕಾಚಾರ

ದೆಹಲಿ: ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಗುರುತಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಪಕ್ಷದ ಹೈಕಮಾಂಡ್ ನೇಮಕ ಮಾಡಿದೆ. ಅತ್ತ ಮಧ್ಯಪ್ರದೇಶದಲ್ಲಿ ರಾಜಕೀಯ ಬೆಳವಣಿಗೆಯಾಗುತ್ತಿದ್ದು ಕಾಂಗ್ರೆಸ್ ಪಕ್ಷಕ್ಕೆ ಭಿನ್ನಮತೀಯರು ಬಲವಾದ ಹೊಡೆತ ನೀಡುತ್ತಿರುವಂತೆಯೇ ಇತ್ತ ದಕ್ಷಿಣದಲ್ಲಿ ಪಕ್ಷ ಬಲಪಡಿಸಲು ಅಧಿನಾಯಕಿ ಸೋನಿಯಾ ಗಾಂಧಿ ಈ ಆದೇಶ ಹೊರಡಿಸಿದ್ದಾರೆ.

ಪ್ರಬಲ ಸಮುದಾಯದಲ್ಲೊಂದಾದ ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡುವ ಮೂಲಕ ಪಕ್ಷ ಬಲಪಡಿಸುವ ಸೂತ್ರ ಸೋನಿಯಾ ಅವರದ್ದು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಸಮುದಾಯಗಳ ಪ್ರತಿನಿಧಿಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಪ್ರಮುಖವಾಗಿ ಡಿ.ಕೆ.ಶಿವಕುಮಾರ್‌ ಹಾಗೂ ಎಂ.ಬಿ.ಪಾಟೀಲ್ ಹೆಸರುಗಳು ಮುಂಚೂಣಿಯಲ್ಲಿದ್ದವು. ಬಿಜೆಪಿಯತ್ತ ಕೇಂದ್ರೀಕೃತವಾಗಿರುವ ಲಿಂಗಾಯತ ಮತಗಳನ್ನು ಸೆಳೆಯಬೇಕಾದರೆ ಎಂ.ಬಿ.ಪಾಟೀಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಒಳಿತು ಎಂದು ಸಿದ್ದರಾಮಯ್ಯ ಬಣದ ಮುಖಂಡರು ತೀವ್ರ ಲಾಭಿ ಮಾಡಿದ್ದರು. ಆದರೆ ಇದೀಗ ಡಿ.ಕೆ.ಶಿ.ಗೆ ಕೆಪಿಸಿಸಿ ಸಾರಥ್ಯ ಸಿಗುವ ಮೂಲಕ ಎಂ.ಬಿ.ಪಾಟೀಲ್ ಆಸೆಗೆ ತಣ್ಣೀರು ಎರಚಿದಂತಾಗಿದೆ.

ಇದೇ ವೇಳೆ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಸಲೀಮ್ ಅಹಮದ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಈ ಮೂಲಕ ಲಿಂಗಾಯತ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಆಕ್ರೋಶ ತಣಿಸುವ ಪ್ರಯತ್ನವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಿದೆ.
ಇದಲ್ಲದೆ ವಿಧಾನ ಪರಿಷತ್‌ಗೆ ನಾರಾಯಣಸ್ವಾಮಿ ಮತ್ತು ವಿಧಾನಸಭೆಗೆ ಅಜಯ್ ಸಿಂಗ್ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ.

Related posts