ಎಬಿವಿಪಿ ಕಾರ್ಯಕರ್ತರ ಮೇಲಿನ ದೌರ್ಜನ್ಯ ಬಗ್ಗೆ ನ್ಯಾಯಾಂಗ ತನಿಖೆಗೆ ಸಿ.ಟಿ.ರವಿ ಆಗ್ರಹ

ಬೆಂಗಳೂರು: ಕೆಪಿಎಸ್‌ಸಿ ಅಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದು, ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಂಧಿತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು. ಭ್ರಷ್ಟಾಚಾರ ಹಾಗೂ ಅನ್ಯಾಯದ ವಿರುದ್ಧ ನ್ಯಾಯಯುತ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸರ್ಕಾರ ಅಮಾನುಷವಾಗಿ ವರ್ತಿಸಿದೆ ಎಂದು ಟೀಕಿಸಿದರು.

ಐಎಎಸ್ ಅಧಿಕಾರಿ ಜ್ಞಾನೇಂದ್ರ ಇ.ಡಿ. ತನಿಖೆಗೆ ಸಿಗದೆ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದ ಅವರು, ಗೃಹ ಸಚಿವರು ಈ ವಿಚಾರದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಉದ್ಯಾನವನಗಳ ಮೂಲ ಉದ್ದೇಶವನ್ನೇ ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಸಿ.ಟಿ.ರವಿ ಆರೋಪಿಸಿದರು. ಗೋಮಾಳ ಮತ್ತು ಕೆರೆಗಳ ನಂತರ ಇದೀಗ ಸರ್ಕಾರದ ಕಣ್ಣು ಉದ್ಯಾನಗಳ ಮೇಲೆ ಬಿದ್ದಿದೆ ಎಂದರು.

ಬೆಂಗಳೂರಿನಲ್ಲಿ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್‌ನಂತಹ ಉದ್ಯಾನಗಳನ್ನು ಹೊರತುಪಡಿಸಿ ಹೊಸ ಸಮಾನಾಂತರ ಉದ್ಯಾನಗಳನ್ನು ನಿರ್ಮಿಸುವ ಸಾಮರ್ಥ್ಯ ಇಲ್ಲದಿದ್ದರೂ, ಇರುವ ಉದ್ಯಾನಗಳನ್ನು ಉಳಿಸುವ ಪ್ರಯತ್ನವೂ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಿಯಲ್ ಎಸ್ಟೇಟ್ ಮಾಫಿಯಾದ ದುರಾಸೆಗೆ ಉದ್ಯಾನಗಳು ಹಾಗೂ ಆಟದ ಮೈದಾನಗಳು ಬಲಿಯಾಗಬಾರದು ಎಂದು ಅವರು ಹೇಳಿದರು.

ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಪ್ರಾಮಾಣಿಕ ಮತದಾರರ ಹೆಸರು ಕೈಬಿಡಬಾರದು ಹಾಗೂ ಅಕ್ರಮ ಮತದಾರರ ಹೆಸರು ಸೇರ್ಪಡೆಯಾಗಬಾರದು. ಖಾಯಂ ನಿವಾಸಿ ದೃಢಪತ್ರ (PRC) ಮೂಲಕ ಅಕ್ರಮ ಮತದಾರರನ್ನು ಸಕ್ರಮಗೊಳಿಸುವಂತಾಗಬಾರದು ಎಂದು ಒತ್ತಾಯಿಸಿದರು.

Related posts