ಕಾವೇರಿ ಅಖಾಡದಲ್ಲಿ ವಕೀಲರು; ಅತ್ತ ‘ಸುಪ್ರೀಂ’ ಸಮರದಲ್ಲೂ ಇಂಪ್ಲೀಡ್, ಇತ್ತ ಹೋರಾಟದಲ್ಲೂ ಸಾಥ್

ಬೆಂಗಳೂರು: ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಆರೋಪಿಸಿ ಕನ್ನಡ ಪರ ಸಂಘಟನೆಗಳು ರೊಚ್ಚಿಗೆದ್ದಿವೆ. ಕಳೆದ ವಾರಾಂತ್ಯದಲ್ಲಿ ಮಂಡ್ಯ ಬಂದ್ ಆಚರಿಸಿರುವ ರೈತ, ಕನ್ನಡಪರ ಸಂಘಟನೆಗಳು, ನಾಳೆ ಬೆಂಗಳೂರು ಬಂದ್‌ಗೆ ಕರೆ ನೀಡಿವೆ.

ರೈತ ಸಂಘಟನೆಗಳ ಒಕ್ಕೂಟದ ಮುಂದಾಳುತ್ವದಲ್ಲಿ ರಚನೆಯಾಗಿರುವ ಜಲಸಂರಕ್ಷಣಾ ಸಮಿತಿ ನಾಳಿನ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, ಈ ಬಂದ್ ಕರೆಗೆ ವಕೀಲರ ಸಂಘಟನೆಯೂ ಬೆಂಬಲ ಘೋಷಿಸಿದೆ. ನಾಳಿನ ಬಂದ್’ನಲ್ಲಿ ವಕೀಲರ ಸಂಘವೂ ಭಾಗಿಯಾಗಿ ಕಾವೇರಿ ಹೋರಾಟಕ್ಕೆ ಶಕ್ತಿ ನೀಡಲಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಎಸ್ ರೆಡ್ಡಿ ತಿಳಿಸಿದ್ದಾರೆ.

ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಿವೇಕ್ ಎಸ್ ರೆಡ್ಡಿ, ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೇ ಅನ್ಯಾಯ ಆಗುತ್ತಲೇ ಇವೆ. ರಾಜ್ಯದ ಜನತೆಗೆ ನೀರಿಲ್ಲದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಹೇಗೆ ನೀರು ಹರಿಸಲಿ? ಎಂದು ಪ್ರಶ್ನೆ ಮಾಡಿದ್ದಾರೆ.

ಕಾನೂನು ಹೋರಾಟ:

ಕಾವೇರಿ ನದಿನೀರು ವಿಚಾರದಲ್ಲಿ ವಕೀಲರ ಸಂಘವು ಸುಪ್ರೀಂ ಕೋರ್ಟಿನಲ್ಲಿನ ಕಾನೂನು ಸಮರದಲ್ಲಿ ರಾಜ್ಯದ ಪರವಾಗಿ ಭಾಗವಹಿಸಿದೆ ಎಂದು ತಿಳಿಸಿದ ವಿವೇಕ್ ಎಸ್.ರೆಡ್ಡಿ, ಸರ್ವೋಚ್ಚ ನ್ಯಾಯಾಲಯದಲ್ಲಿ ಇರುವ ಧಾವೆಯಲ್ಲಿ ಬೆಂಗಳೂರು ವಕೀಲರ ಸಂಘ ಇಂಪ್ಲೀಡ್ ಆಗಿದೆ. ಬೆಂಗಳೂರಿಗೆ ಅಗತ್ಯವಿರುವಷ್ಟು ನೀರು ಸಿಗುವಂತಾಗಬೇಕು ಎಂದು ನ್ಯಾಯಪೀಠದ ಗಮನಸೆಳೆಯಲಾಗಿದೆ ಎಂದು ವಿವರಿಸಿದರು.

ಬೆಂಗಳೂರು ನರವು ಜಗತ್ತಿನ ಪ್ರಮುಖ ಆರ್ಥಿಕ ಶಕ್ತಿಕೇಂದ್ರಗಳಲ್ಲಿ ಒಂದಾಗಿದೆ. ಬೆಂಗಳೂರು ಜಲಮಂಡಳಿ ಪ್ರಕಾರ ಬೆಂಗಳೂರು ನಗರಕ್ಕೆ 25 ಟಿಎಂಸಿ ನೀರು ಕುಡಿಯುವ ಉದ್ದೇಶಕ್ಕೆ ಅಗತ್ಯವಿದೆ. ಈ ಅಂಶಗಳನ್ನು ವಕೀಲರ ಸಂಘ ಸುಪ್ರೀ ಕೋರ್ಟ್ ಗಮನಕ್ಕೆ ತಂದಿದೆ ಎಂದವರು ತಿಳಿಸಿದ್ದಾರೆ. ಇನ್ನೊಂದೆಡೆ ಬೆಂಗಳೂರಿಗೆ ಅಗತ್ಯವಿರುವ ಪ್ರಮಾಣದಲ್ಲಿ ನೀರನ್ನು ಪೂರೈಸುವ ಜವಾಬ್ಧಾರಿ ರಾಜ್ಯ ಸರ್ಕಾರದ್ದಷ್ಟೇ ಅಲ್ಲ, ಕೇಂದ್ರ ಸರ್ಕಾರದ್ದೂ ಇದೆ. ಹಾಗಾಗಿ ರಾಜ್ಯದ ಹಾಗೂ ಬೆಂಗಳೂರಿನ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ವಿವೇಕ್ ರೆಡ್ಡಿ ಅಭಿಪ್ರಾಯ ಪಟ್ಟಿದ್ದಾರೆ.

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ವಕೀಲರ ಸಂಘ ಸಹಿಸಲ್ಲ ಎಂದಿರುವ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ರೆಡ್ಡಿ, ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಸಿಗುವಂತಾಗಬೇಕಿದೆ. ಹಾಗಾಗಿ ಕಾವೇರಿ ಹೋರಾಟದಲ್ಲಿ ನಮ್ಮ ಸಂಘವೂ ಭಾಗಿಯಾಗಲಿದೆ ಎಂದು ಪ್ರಕಟಿಸಿದರು.

Related posts