ಮೈಸೂರು: ಕಾವೇರಿ, ಮಹದಾಯಿ ಸಮರ ಇದೀಗ ಜನಪ್ರತಿನಿಧಿಗಳಿಗೂ ಸವಾಲೆಂಬಂತಾಗಿದೆ. ಸೆಪ್ಟೆಂಬರ್ 4ರಂದು ರಾಜ್ಯಾದ್ಯಂತ ಸಂಸದರ ಕಚೇರಿ ಬಳಿ ರೈತರ ಪ್ರತಿಭಟನೆ ನಡೆಯಲಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ರೈತ ಮುಖಂಡರಾದ ವೀರನಗೌಡ ಪಾಟೀಲ್, ಸುರೇಶ್ ಮ ಪಾಟೀಲ್, ರಮೇಶ್ ಉಗಾರ್, ಜಿ.ವಿ.ಲಕ್ಷ್ಮಿದೇವಿ, ಎಂ.ಬಿ.ಚೇತನ್ ಸೋಮಶೇಖರ
ಹತ್ತಳ್ಳಿ, ದೇವರಾಜ್ ಬರಡನಫುರ ನಾಗರಾಜ ಸಹಿತ ಹೋರಾಟಗಾರರ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕುರುಬೂರು ಶಾಂತಕುಮಾರ್, ರಾಜ್ಯಾದ್ಯಂತ ಸೆಪ್ಟಂಬರ್ 4ರಂದು ಸೋಮವಾರ ರಾಜ್ಯದ ಲೋಕಸಭಾ ಸದಸ್ಯರುಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಕಾವೇರಿ, ಮಹದಾಯಿ ನದಿ ನೀರಿನ ವಿವಾದ ಕುರಿತು ಯಾವುದೇ ಮಾತನಾಡದೆ ಮೂಕರಂತೆ ಇರುವ ಲೋಕಸಭಾ ಸದಸ್ಯರ ಕಚೇರಿಗಳ ಮುಂದೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ಜಲ ಸಂರಕ್ಷಣಾ ಸಮಿತಿಯು ಪ್ರತಿಭಟನೆ ನಡೆಸಿ, ಹಕ್ಕೊತ್ತಾಯ ಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಕಬಿನಿ, ಕಾವೇರಿ ನೀರು ತಮಿಳುನಾಡಿಗೆ ಹರಿಸಿ ರಾಜ್ಯದ ರೈತರನ್ನ ರಾಜ್ಯ ಸರ್ಕಾರ ಬಲಿಕೊಟ್ಟಿದೆ ಎಂದು ಆಕ್ರೋಶ ಹೊರಹಾಕಿದ ಅವರು, ಮಹದಾಯಿ ನೀರಿನ ವಿವಾದ ಬಗೆಹರಿಸಲು ಹಾಗೂ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದರು.
ಕಬ್ಬು ಬೆಳೆಗಾರರಿಗೆ ಬರಬೇಕಾದ ಹಿಂದಿನ ವರ್ಷದ ಬಾಕಿ ಹೆಚ್ಚುವರಿ 150 ರೂ ಹಣವನ್ನು ಸಕ್ಕರೆ ಕಾರ್ಖಾನೆಗಳಿಂದ ಕೂಡಲೇ ಕೊಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ ಅವರು, ಪ್ರಸಕ್ತ ಸಾಲಿನ 2023- 24ನೇ ಸಾಲಿನ ಕಬ್ಬಿನ ದರ ಏರಿಕೆ ಮಾಡಬೇಕು. ಕೃಷಿ ಪಂಪ್ಸೆಟ್ಟುಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿರುವುದನ್ನು ವಿರೋಧಿಸಿ ,ಆಧಾರ್ ಕಾರ್ಡ್ ಲಿಂಕ್ ಮಾಡುತ್ತಿರುವುದನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ರೈತ ಬಿತ್ತಿದ ಬೀಜ ಸತ್ತಿದೆ, ಅಂತರ್ಜಲ ಕುಸಿದಿದೆ ರಾಜ್ಯದಲ್ಲಿ ಬರಫಿಡಿತ ಪ್ರದೇಶಗಳ ಜನ ಜನವಾರಗಳ ರಕ್ಷಣಾತ್ಮಕ ಕ್ರಮ ಮಾಡದೆ ಸರ್ಕಾರ ನಿರ್ಲಕ್ಷ ತೋರಿಸುತ್ತಿದೆ ಎಂದು ಆರೋಪಿಸಿದ ಅವರು, ರಾಜ್ಯ ಬಜೆಟ್ ನಲ್ಲಿ ಕೃಷಿಗೆ ಅನುದಾನ ಕಡಿತ ಮಾಡಿರುವ ಮಾಡಿರುವುದಕ್ಕೆ ಆಕ್ಷೇಪಿಸಿದರು.
ಕೇಂದ್ರ ಸರ್ಕಾರ ಅಕ್ಕಿ, ಸಕ್ಕರೆ, ಈರುಳ್ಳಿ, ರಪ್ತು ನಿಷೇಧ ಮಾಡಿರುವುದನ್ನ ಖಂಡಿಸಿ, ಬಗರಹುಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ವಿತರಿಸುವಂತೆ ಆಗ್ರಹಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯುವ ಉದ್ದೇಶದಿಂದ ರಾಜ್ಯಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.