ಚಾಮರಾಜನಗರ : ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ, ಹನೂರುತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಭಕ್ತರಿಂದ ಕೊಟ್ಯಾನ್ತರ ರೂಪಾಯಿ ಕಾಣಿಕೆ ಹರಿದುಬರುತ್ತಿದೆ. ಶುಕ್ರವಾರ ಕ್ಷೇತ್ರದಲ್ಲಿ ನಡೆದ ಹುಂಡಿಗಳ ಎಣಿಕೆ ಕಾರ್ಯದಲ್ಲಿ 2.38 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಬೆಳಿಗ್ಗೆ ಸಾಲೂರು ಬೃಹನ್ಮಠಾಧ್ಯಕ್ಷ ವಿದ್ವಾನ್ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿರವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲು ಹಾಗೂ ಪೋಲಿಸ್ ಬಂದೋಬಸ್ತ್ ನಲ್ಲಿ ಎಣಿಕೆ ಮಾಡಲಾಯಿತು.
ಈ ಬಾರಿ ಅಮಾವಾಸ್ಯೆ ಹಾಗೂ ಸರ್ಕಾರಿ ರಜಾ ದಿನಗಳಂದು ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿದ್ದರು. ಕಳೆದ 36 ದಿನಗಳ ಅವಧಿಯಲ್ಲಿ 2 ಕೋಟಿ 38 ಲಕ್ಷದ 43 ಸಾವಿರದ 177 ರೂಪಾಯಿ ಹಣ, 63 ಗ್ರಾಂ ಚಿನ್ನ ಹಾಗೂ 3.173 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀ ಮಲೆ ಮಹದೇಶ್ವರಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ಉಪಕಾರ್ಯದರ್ಶಿ ಜಿ ಎಲ್ ಚಂದ್ರಶೇಖರ್ ,ಮ,ಬೆಟ್ಟ ಪೊಲೀಸರು ಸೇರಿದಂತೆ ಪ್ರಾಧಿಕಾರದ ಸಿಬ್ಬಂದಿ ವರ್ಗದವರು ಎಣಿಕೆ ಕಾರ್ಯದ ವೇಳೆ ಉಪಸ್ಥಿತರಿದ್ದರು.