ಬೆಂಗಳೂರು: ಬಿಜೆಪಿ -ಜೆಡಿಎಸ್ ಮೈತ್ರಿಯನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್ ನಾಯಕರು, ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರನ್ನು ಕಟ್ಟಿಹಾಕಲು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಅವರ ನಡೆ ಬಗ್ಗೆ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರಾದ ರಾಮಚಂದ್ರಪ್ಪ ಮತ್ತು ಜಿ.ಸಿ.ರಾಜು ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ರಾಮನಗರ ಜಿಲ್ಲೆಯ ರಾಜಕಾರಣದಲ್ಲಿ ಅವಕಾಶವಾದ ರಾಜಕಾರಣದ ಅಪ್ಪುಗೆಯನ್ನು ಮಾಡಿರುವ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸ್ವಯಂಘೋಷಿತ ಬಿಜೆಪಿ ನಾಯಕ ಸಿ.ಪಿ.ಯೋಗೀಶ್ವರ್ ಜನರಿಗೆ ಪುಕ್ಕಟೆ ಮನರಂಜನೆಯನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು. ತಮ್ಮ ರಾಜಕೀಯದ ಅಸ್ತಿತ್ವಕ್ಕಾಗಿ ಒಬ್ಬರ ಹೆಗಲ ಮೇಲೆ ಇನ್ನೊಬ್ಬರು ಕೈ ಹಾಕಿ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ರವರನ್ನು ಟೀಕಿಸುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು. .
೧೯೯೯ ರಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಕಾಂಗ್ರೆಸ್ ವಿರುದ್ಧ ಆಯ್ಕೆಯಾದ ಸಿ.ಪಿ.ಯೋಗೀಶ್ವರ್ ಅದೇ ಕ್ಷೇತ್ರದಲ್ಲಿ ೨೦೦೪ ಮತ್ತು ೨೦೦೮ರಲ್ಲಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದರು. ಮಂತ್ರಿ ಆಸೆಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ೨೦೦೯ ರಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಮತ್ತು ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪರಾಭವಗೊಂಡರು. ೨೦೧೧ರ ಉಪಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾದುದನ್ನು ಹೊರತುಪಡಿಸಿದರೆ ಇಲ್ಲಿಯವರೆಗೆ ಯೋಗೀಶ್ವರ್ರವರು ಯಾವುದೇ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿರುವುದಿಲ್ಲ ಎಂದು ರಮೇಶ್ ಬಾಬು ಬೆಳಕುಚೆಲ್ಲಿದರು.
೧೯೯೯ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್ರವರ ವಿರುದ್ಧ ಸೋಲನ್ನು ಕಂಡ ಹೆಚ್.ಡಿ.ಕುಮಾರಸ್ವಾಮಿ ಯಾವುದೇ ಸಿದ್ದಾಂತವಿಲ್ಲದೆ ಕಾಂಗ್ರೆಸ್ ಮತ್ತು ಡಿ.ಕೆ.ಶಿವಕುಮಾರ್ ಕುಟುಂಬವನ್ನು ಅವಕಾಶ ಸಿಕ್ಕಾಗಲೆಲ್ಲ ಟೀಕಿಸುವ ಪ್ರವೃತ್ತಿಗೆ ಮುಂದಾಗಿದ್ದಾರೆ. ಮುಖ್ಯಮಂತ್ರಿ ಪದವಿಯ ಕನಸಿನಿಂದ ವಂಚಿತರಾಗಿರುವ ಕುಮಾರಸ್ವಾಮಿ, ರಾಜಕೀಯವಾಗಿ ನೆಲೆಯನ್ನು ಕಳೆದುಕೊಂಡಿರುವ ಸಿ.ಪಿ.ಯೋಗೀಶ್ವರ್, ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ರವರನ್ನು ಟೀಕಿಸಲು ಪರಸ್ಪರ ಕೈಜೋಡಿಸಿದ್ದು, ಸರ್ಕಾರವನ್ನು ಉರುಳಿಸುವ ಮಾತನಾಡುತ್ತಿದ್ದಾರೆ. ೨೦೧೯ರಲ್ಲಿ ಕುಮರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ವಾಮ ಮಾರ್ಗದಲ್ಲಿ ತೆಗೆದ ಕಾರಣಕ್ಕಾಗಿ ಬಿಜೆಪಿ ಸಿ.ಪಿ.ಯೋಗೀಶ್ವರ್ರವರಿಗೆ ವಿಧಾನಪರಿಷತ್ತಿನ ಸದಸ್ಯರನ್ನು ಮಾಡಿ, ರಾಮನಗರ ಜಿಲ್ಲೆಯಲ್ಲಿ ಕುಮಾರಸ್ವಾಮಿಯನ್ನು ಹಣಿಯಲು ಮಂತ್ರಿ ಸ್ಥಾನ ನೀಡಿತ್ತು ಎಂದವರು ಹೇಳಿದರು.
ಸಿ.ಪಿ.ಯೋಗೀಶ್ವರ್ ಬೆಟ್ಟಿಂಗ್ ದಂದೆ ಮಾಡುವ ಕೆಲವರ ಜೊತೆ ಸೇರಿಕೊಂಡು ತಮ್ಮ ಸರ್ಕಾರ ಉರುಳಿಸಿದರು ಎಂದು ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು ಮತ್ತು ಇದೇ ಕಾರಣಕ್ಕಾಗಿ ಸಾರ್ವಜನಿಕವಾಗಿ ಏಕವಚನದಲ್ಲಿ ಇಬ್ಬರೂ ಪರಸ್ಪರ ನಿಂದಿಸಿಕೊಂಡಿದ್ದರು. ಸರ್ಕಾರ ತೆಗೆದವರು ಮತ್ತು ತೆಗೆಸಿಕೊಂಡವರು ಒಬ್ಬರಿಗೊಬ್ಬರು ಅಪ್ಪಿಕೊಂಡು, ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರ ತೆಗೆಯುವ ಮಾತನಾಡುತ್ತಿದ್ದಾರೆ. ಬಿಜೆಪಿ ನಾಯಕರ ಅಶ್ಲೀಲ ಸಿಡಿಗಳನ್ನು ಬಳಸಿಕೊಂಡು ಯೋಗೀಶ್ವರ್ ಬ್ಲಾಕ್ಮೇಲ್ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ ಎಂದು ಯತ್ನಾಳ್, ರೇಣುಕಾಚಾರ್ಯ ಮತ್ತು ಇತರೆ ನಾಯಕರು ಆರೋಪ ಮಾಡಿದ್ದರು ಎಂದು ರಮೇಶ್ ಬಾಬು ಅವರು ಜೆಡಿಎಸ್-ಬಿಜೆಪಿ ಮೈತ್ರಿ ಕಸರತ್ತು ಬಗ್ಗೆ ತಮ್ಮದೇ ದಾಟಿಯಲ್ಲಿ ಟೀಕಿಸಿದರು.
ಅಕ್ಟೋಬರ್ ೨೦೨೨ರಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗರಿಗಳ ಶಂಕುಸ್ಥಾಪನೆ/ ಪೂಜಾ ಕಾರ್ಯಕ್ರಮದ ಸಂಬAಧ ಒಬ್ಬರಿಗೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಜೆಡಿಎಸ್ ಕಾರ್ಯಕರ್ತರು ಯೋಗೀಶ್ವರ್ ಕಾರಿನ ಮೇಲೆ ಮೊಟ್ಟೆ ಎಸೆದು ಅಡ್ಡಿಪಡಿಸಿದ್ದನ್ನು ಬಸವರಾಜ್ ಬೊಮ್ಮಾಯಿರವರೇ ಖಂಡಿಸಿದ್ದರು. ಇದೇ ಯೋಗೀಶ್ವರ್ ಬಿಜೆಪಿ ನಾಯಕ ಅಮಿತ್ ಷಾರವರನ್ನು ಗೂಂಡಾ ಎಂದು ಕರೆದ ಆಡಿಯೋ ಜನವರಿ ೨೩ರಲ್ಲಿ ಸದ್ದು ಮಾಡಿತ್ತು. ಕುಮಾರಸ್ವಾಮಿ ಹೊಂದಾಣಿಕೆ ರಾಜಕೀಯ ಕುರಿತು ಹಲವು ಬಾರಿ ಆರೋಪ ಮಾಡಿ, ಜೋಕರ್ ಎಂದು ಕರೆದಿದ್ದರು. ಯೋಗೀಶ್ವರ್ರವರನ್ನು ಒಬ್ಬ ಬಚ್ಚಾ ಎಂದು ಕರೆದು ನೀಚತನದಲ್ಲಿ ಮಂತ್ರಿ ಆಗಿದ್ದಾನೆ ಎಂದು ಕುಮಾರಸ್ವಾಮಿ ನಿಂದಿಸಿದ್ದರು. ಆದರೆ ಇದೀಗ ರಾಜಕೀಯ ಅಸ್ತಿತ್ವಕ್ಕಾಗಿ ಈ ಇಬ್ಬರೂ ಪರಸ್ಪರ ಅಪ್ಪಿಕೊಳ್ಳುತ್ತಿದ್ದಾರೆ ಎಂದು ರಮೇಶ್ ಬಾಬು ಲೇವಡಿ ಮಾಡಿದರು.