ಕೋಟೆನಾಡಿಗೂ ಚೀನಾ ವೈರಸ್ ಲಗ್ಗೆ: ಸಂಸದ ಸಿದ್ದೇಶ್ ಪುತ್ರಿಗೆ ಕೊರೋನಾ ಪಾಸಿಟಿವ್

ಚಿತ್ರದುರ್ಗ: ಚೀನಾ ಕೊರೋನಾ ವೈರಸ್ ಇದೀಗ ಬಯಲುಸೀಮೆಯ ಜಿಲ್ಲೆಗಳಿಗೂ ವ್ಯಾಪಿಸಿದೆ. ಕೋಟೆನಾಡು ದುರ್ಗಕ್ಕೂ ಲಗ್ಗೆ ಹಾಕಿರುವ ಮಾರಣಾಂತಿಕ ವೈರಸ್, ಭೀತಿಯ ಅಲೆಯನ್ನೇ ಸೃಷ್ಟಿಸಿದೆ.  ಮಾಜಿ ಕೇಂದ್ರ ಸಚಿವರೂ ಆದ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಪುತ್ರಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಈ ಮೂಲಕ ಬಯಲು ಸೀಮೆಯ ಜಿಲ್ಲೆಯಲ್ಲಿ ಮೊದಲ ಕೊರೋನಾ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿರುವ ಜಿ.ಎಂ ಸಿದ್ದೇಶ್ವರ ಅವರ ಮನೆಯಲ್ಲಿರುವ ಪುತ್ರಿ, ಕೆಲ ದಿನಗಳ ಹಿಂದಷ್ಟೇ ಗಯಾನದಿಂದ ಭಾರತಕ್ಕೆ ವಾಪಸ್ಸಾಗಿದ್ದರು. ಆಸ್ಪತ್ರೆಗೆ ದಾಖಲಾಗಿರುವ ಅವರನ್ನು ಪರೀಕ್ಷೆಗೆ ಗುರಿಪಡಿಸಲಾಗಿದ್ದು ಪ್ರಯೋಗಾಲಯದ ವರದಿಯನ್ನಾಧರಿಸಿ ಕೊರೋನಾ ಸೋಕು ತಗುಲಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.

ಸಂಸದರು ಸೇರಿದಂತೆ 6 ಜನ ಹೊರ ದೇಶಕ್ಕೆ ಪ್ರವಾಸ ತೆರಳಿ ವಾಪಸ್ಸಾಗಿದ್ದರು. ಸಂಸದ ಜಿ.ಎಂ.ಸಿದ್ದೇಶ್ವರ ಸಹಿತ ಎಲ್ಲರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಮೂವರಿಗೆ ಸಂಬಂಧಿಸಿದಂತೆ ವರದಿಯು ನೆಗೆಟಿವ್ ಬಂದಿದೆ. ಇನ್ನುಳಿದವರ ಪರೀಕ್ಷಾ ವರದಿಯನ್ನು ಎದುರು ನೋಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ನಡುವೆ, ಸೋಂಕು ದೃಢಪಟ್ಟಿರುವವರ ಜೊತೆಗೆ ಮಕ್ಕಳೂ ಇದ್ದರು. ಅವರಲ್ಲಿ ಯಾವುದೇ ಸೋಂಕು ಕಂಡು ಬಂದಿಲ್ಲ. ಈ ಸೋಂಕು ಪ್ರಕರಣ ಚಿತ್ರದುರ್ಗ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಹಾಗಾಗಿ ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಭೀಮಸಮುದ್ರದಲ್ಲಿರುವ ಜಿ.ಎಂ.ಸಿದ್ದೇಶ್ವರರ ಮನೆ ಸುತ್ತಲೂ 5 ಕಿಲೋಮೀಟರ್ ಪ್ರದೇಶವನ್ನು ರೆಡ್ ಝೋನ್ ಎಂದು ಗುರುತಿಸಲಾಗಿದೆ. ಈ ರೆಡ್ ಝೋನ್ ವ್ಯಾಪ್ತಿಯಲ್ಲಿನ ಮನೆಯವರು ಯಾರೂ ಹೊರ ಬಾರದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

Related posts