ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಮಾಡಿಕೊಂಡು ಕೆಲವು ಕಿಡಿಗೇಡಿಗಳು ಒಂದು ಕೋಮಿನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವು ಊರುಗಳಲ್ಲಿ ಈ ಸಮುದಾಯದವರನ್ನು ಗಡಿಪಾರು ಮಾಡುವ ಹಾಗೂ ಸಾಮಾಜಿಕವಾಗಿ ಬಹಿಷ್ಕಾರ ಹಾಕುವ ಮಟ್ಟಕ್ಕೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ವಿಚಾರವಾಗಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡುರುವುದನ್ನು ಅಭಿನಂದಿಸುತ್ತೇನೆ. ಅವರ ಹೇಳಿಕೆ ಕೇವಲ ಮಾತಿಗೆ ಮಾತ್ರ ಸೀಮಿತವಾಗಬಾರದು. ಅದು ಗ್ರಾಮಪಂಚಾಯ್ತಿ ಮಟ್ಟಕ್ಕೂ ತಲುಪಬೇಕು. ಸೈಬರ್ ಕ್ರೈಮ್ ವಿಭಾಗವನ್ನು ಬಳಸಿ, ಅಪರಾಧಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಏಪ್ರಿಲ್ 14ರ ನಂತರ ಲಾಕ್ ಡೌನ್ ಮುಂದುವರಿದರೆ ಸರ್ಕಾರಿ ನೌಕರರ ವೇತನ ಕಡಿತಗೊಳಿಸುವುದಾಗಿ ಸಿಎಂ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಅಂತಹ ತೀರ್ಮಾನ ಕೈಗೊಳ್ಳಬಾರದು ಎಂದು ಡಿಕೆಶಿ ಹೇಳಿದರು. ಸಹಕಾರಿ ಸಂಘಗಳನ್ನು ಬಳಸಿಕೊಂಡು ರೈತರು ಬೆಳೆದ ಹಣ್ಣು, ತರಕಾರಿ, ಸೊಪ್ಪುಗಳನ್ನು ಸರ್ಕಾರ ಖರೀದಿಸಿ ಅವುಗಳನ್ನು ತಾಲೂಕು, ಜಿಲ್ಲಾ ಮಟ್ಟದ ನಗರಗಳಲ್ಲಿ ಗ್ರಾಹಕರಿಗೆ ಕೈಗೆಟುಕುವ ಬೆಲೆಗೆ ಮಾರಾಟ ಮಾಡಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ಮಾಡಿದರು.
ಕೆಪಿಸಿಸಿ ವತಿಯಿಂದ ಮಾಜಿ ಸಚಿವ ರಮೇಶ್ ಕುಮಾರ್ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದ್ದು, ಈ ಸಮಿತಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಘೋಷಣೆಗಳು ಜನರಿಗೆ ತಲುಪುತ್ತಿದೆಯೇ, ವೈದ್ಯರಿಗೆ ಪಿಪಿಇ ಕಿಟ್ ಕೊರತೆಯಿದೆಯೇ, ಇತ್ಯಾದಿ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆಹಾಕಿದೆ. ಈ ಬಗ್ಗೆ ಸರ್ಕಾರಕ್ಕೆ ಸಲಹೆ ಪಟ್ಟಿಯನ್ನು ನೀಡುವುದಾಗಿ ಡಿಕೆಶಿ ತಿಳಿಸಿದರು.
ಬೇಸಿಗೆ ಆರಂಭವಾಗಿದ್ದು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಡಿಕೆಶಿ ಆರೋಪಿಸಿದರು. ನರೇಗಾ ಉದ್ಯೋಗ ಖಾತ್ರಿ ಯೋಜನೆ ಮುಂದುವರಿಸಿ ದಿನಕ್ಕೆ 275 ರೂಪಾಯಿ ನೀಡುವುದಾಗಿ ಪ್ರಧಾನಮಂತ್ರಿಗಳೇ ತಿಳಿಸಿದ್ದಾರೆ. ಪ್ರತಿಯೊಬ್ಬ ಕಾರ್ಮಿಕನಿಗೆ ತಿಂಗಳಿಗೆ 8-9 ಸಾವಿರ ನೀಡಲು ಹಾಗೂ ಒಂದು ಪಂಚಾಯ್ತಿ 4-5 ಕೋಟಿ ಖರ್ಚು ಮಾಡಲು ಅವಕಾಶವಿದೆ. ನನ್ನ ಕ್ಷೇತ್ರ ಕನಕಪುರದಲ್ಲಿ ಈ ಅನುದಾನವನ್ನು ಹೆಚ್ಚು ಬಳಸಿಕೊಂಡಿರುವುದಕ್ಕೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ. ಜನರು ವೈಯಕ್ತಿಕವಾಗಿ ಉದ್ಯೋಗ ಮಾಡಲು ಪಂಚಾಯ್ತಿ ಮಟ್ಟದಲ್ಲಿ ಸಹಕಾರ ನೀಡಬೇಕು. ಈ ಸಂಬಂಧ ನೋಂದಣಿ ಮಾಡಿಸಿಕೊಳ್ಳಲು 2-3 ದಿನಗಳಲ್ಲಿ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ತಾವು ಜಾಗೃತಿ ಮೂಡಿಸುವುದಾಗಿ ಹೇಳಿದರು.