ಕೊರೋನಾದಿಂದ ಭಾರೀ ಅನಾಹುತ; ಚರ್ಚೆಗೆ ನಾಂದಿಹಾಡಿತೇ ಕೋಡಿಹಳ್ಳಿ ಶ್ರೀಗಳ ಭವಿಷ್ಯವಾಣಿ

ಕೊರೋನಾದಿಂದ ಒಂದು ದೇಶವೇ ನಾಶವಾಗುತ್ತಾ? ದೊಡ್ಡ ದೊಡ್ಡ ನಗರಗಳಿಗೆ ಅಪಾಯವಿದೆಯೇ? ನಾಡಿನ ದೊರೆಗೆ ಕಂಟಕವಿದೆಯಾ? ಇನ್ನೂ ಅನೇಕರು ಪಟ್ಟ ಕಳೆದುಕೊಳ್ಳುತ್ತಾರಾ? ಏನಿದು ಭವಿಷ್ಯವಾಣಿ?

ಹಾಸನ: ರಾಜಕೀಯವಿರಲಿ, ಸಾಮಾಜಿಕ ವಿದ್ಯಮಾನವೇ ಇರಲಿ, ಜನರು ಕುತೂಹಲ ಘಟ್ಟದಲ್ಲಿರುವಾಗ ಭವಿಷ್ಯವಾಣಿ ಮೂಲಕ ಆ ಕೌತುಕವನ್ನು ಕ್ಲೈಮ್ಯಾಕ್ಸ್ ಹಂತಕ್ಕೆ ತಂದು ನಿಲ್ಲಿಸುವವರು ಇತಿಹಾಸ ಪ್ರಸಿದ್ಧ ಕೋಡಿಹಳ್ಳಿ ಮಠಾಧೀಶರು. ರಾಜಕೀಯ ವ್ಯವಸ್ಥೆ, ಆಡಳಿತಾತ್ಮಕ ವಿಚಾರಗಳ ಕುರಿತು ಅನಾದಿಕಾಲದಿಂದಲೂ ನೈಜ ಭವಿಷ್ಯ ಹೇಳುವ ಮೂಲಕ ನಾಡಿನ ಗಮನ ಸೆಳೆಯುತ್ತಿರುವ ಕೋಡಿಮಠ ಸಂಸ್ಥಾನ ಮಠದಿಂದ ಇದೀಗ ಕೊರೋನಾ ಹಾವಳಿ ಸಂದರ್ಭದಲ್ಲಿ ಕುತೂಹಲಕಾರಿ ಭವಿಷ್ಯವಾಣಿ ಕೇಳಿಬಂದಿದೆ.

ಇದೀಗ ಈ ಮಠದ ಪೀಠಾಧಿಪತಿಗಳಾಗಿರುವವರು ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ. ಅವರು ಕೋಡಿಮಠದ ಮಹಾ ಸಂಸ್ಥಾನ ಮಠದಲ್ಲಿ ಕೊರೋನಾ ಸೋಂಕಿನಿಂದಾಗುತ್ತಿರುವ ಕಾಯಿಲೆ ಕುರಿತಂತೆ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಮುಂದಾಗಬಹುದಾದ ಸನ್ನಿವೇಶಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಕೋವಿಡ್-19 ಹಾವಳಿಯಿಂದ ಜಗತ್ತಿಗೆ ಅಪಾಯ ಸ್ವಲ್ಪವೇನಲ್ಲ. ಅಪಾರ ಹಾನಿಯುಂಟಾಗಲಿದ್ದು ಒಂದು ದೇಶವೇ ಅಳಿಸಿಹೋಗಲಿದೆ ಎಂದು ಕೋಡಿಹಳ್ಳಿ ಶ್ರೀಗಳು ವಿಶ್ಲೇಷಣೆ ಮಾಡಿದ್ದಾರೆ. ಅನೇಕ ದೊಡ್ಡ ದೊಡ್ಡ ನಗರಗಳಿಗೆ ಈ ಸೋಂಕಿನಿಂದಾಗಿ ಅಪಾಯ ತಪ್ಪಿದ್ದಲ್ಲ; ಆದರೆ ಸಾಧು ಸಂತರು ತಪಸ್ಸು ಮಾಡಿರುವ ಪುಣ್ಯ ಭೂಮಿ ಭಾರತಕ್ಕೆ ಅಷ್ಟೇನೂ ಹಾನಿಯಿಲ್ಲ ಎಂಬ ಅವರ ಭವಿಷ್ಯವಾಣಿ ಭಾರತೀಯರು ನಿಟ್ಟುಸಿರುಬಿಡುವಂತಿದೆ.

ಯಾರಿಗೆ ಕಂಟಕ?

ಈವರೆಗೂ ಅಪಾರ ಪ್ರಮಾಣದಲ್ಲಿ ಸಾವು-ನೋವಿಗೆ ಕಾರಣವಾಗಿರುವ ಈ ಸೋಂಕು ಮುಂದಿನ ಕೆಲ ಸಮಯ ಜಗತ್ತಿನಲ್ಲಿ ಮತ್ತಷ್ಟು ಗಂಭೀರವಾಗಲಿದೆ ಎಂದ ಅವರು, ಪರಿಸ್ಥಿತಿ ನಿಭಾಯಿಸಲಾಗದೆ ಪ್ರಮುಖರು ಪಟ್ಟ ಕಳೆದುಕೊಳ್ಳಲಿದ್ದಾರೆ ಎಂಬ ಸುಳಿವನ್ನು ನೀಡಿದ್ದಾರೆ. ರಾಜ್ಯ ರಾಜಕಾರಣ ಬಗ್ಗೆಯೂ ಕೋಡಿಮಠದ ಶ್ರೀಗಳು ಒಗಟು ರೂಪದಲ್ಲಿ ಭವಿಷ್ಯವಾಣಿ ಹೇಳಿದ್ದಾರೆ. ನಾಡಿನ ದೊರೆಯ ತೀರ್ಮಾನ ಮರುಪರಿಶೀಲಿಸಬೇಕಿದೆ. ದೇವರ ಮನೆಗೆ ಹೋಗಿರುವುದರಿಂದ ಸುಖ-ದುಃಖಗಳು ಕಾಡಬಹುದು ಎಂದಿದ್ದಾರೆ. ಕೆಲವೊಂದು ನಿರ್ಧಾರಗಳಿಂದ ಅತೃಪ್ತರು ಸಿಡಿದೆದ್ದು ಅರಸನು ಹುದ್ದೆಯನ್ನೂ ಕಳೆದುಕೊಳ್ಳಬಹುದು ಎಂದವರು ಹೇಳಿದ್ದಾರೆ.

ಪ್ರಕೃತಿ ವಿಕೋಪ?

ಮಳೆ ಹೆಚ್ಚಬಹುದು, ಭೂಕಂಪವೂ ಸಂಭವಿಸಬಹುದು, ಸಮುದ್ರ ತೀರದಲ್ಲೂ ಅಪಾಯ ಸಂಭವಿಸಬಹುದು ಎಂಬ ಸಂಭವನೀಯ ಸನ್ನಿವೇಶಗಳತ್ತ ಅವರು ಬೊಟ್ಟು ಮಾಡಿದ್ದಾರೆ.

ಈ ನಡುವೆ, ಶ್ರೀಗಳು ಪರಿಹಾರ ಮಾರ್ಗವನ್ನೂ ತೋರಿಸಿದ್ದಾರೆ. ಕೊರೋನಾ ನಿಗ್ರಹ ಹಾಗೂ ಸಂಭವನೀಯ ಕಂಟಕದಿಂದ ಪಾರಾಗಲು ಎಲ್ಲರ ಮನೆಗಳಲೂ ದೀಪ ಉರಿಯುತ್ತಿರಬೇಕು, ನಂದಾ ದೀಪ ಸದಾ ಉರಿಯುತ್ತಿರಲಿ. ಅದರಿಂದ ಒಳಿತಾಗುತ್ತದೆ ಎಂದು ಶೀಗಳು ಪರಿಹಾರ ಹೇಳಿದ್ದಾರೆ.

ಇದನ್ನೂ ಓದಿ.. ಭಾರತ ಈಗ ವಿಶ್ವಗುರು..!! ಜೀವ ಸಂಜೀವಿನಿಗಾಗಿ ಮೋದಿ ಮುಂದೆ ದುಂಬಾಲು ಬಿದ್ದ ಬಲಾಢ್ಯ ರಾಷ್ಟ್ರಗಳು

Related posts