ಕಲ್ಲಂಗಡಿ ತಿಂದರೆ ಕೊರೋನಾ ಬರುತ್ತಾ? ಸುದ್ದಿ ತಂದೊಡ್ಡಿದ ಆಪತ್ತು

 ಕಲ್ಲಂಗಡಿ ತಿಂದರೆ ಕೊರೋನಾ ಬರುತ್ತಾ? ಏನಿದು ಆತಂಕಕಾರಿ ಸುದ್ದಿ?  ಈ ರೀತಿಯ ಸುದ್ದಿ ಹಬ್ಬಿದ್ದರಿಂದಾಗಿ ಕಲ್ಲಂಗಡಿ ಬೆಳೆಗಾರರಲ್ಲಿ ಆತಂಕ. ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಸರ್ಕಾರದಿಂದ ಶಾಕ್

ವಿಜಯಪುರ: ಬೇಸಿಗೆಯ ಬಿರುಬಿಸಿಲಲ್ಲಿ ಬೆಂದವರನ್ನು ಉಲ್ಲಾಸಿತರನ್ನಾಗಿ ಚೈತನ್ಯ ಹೆಚ್ಚಿಸುವ ಹಣ್ಣು ಕಲ್ಲಂಗಡಿ. ಪ್ರಸ್ತುತ ಬೇಸಿಗೆಯ ದಿನಗಳಲ್ಲಿ ಕಲ್ಲಂಗಡಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಕೊರೋನಾ ಒಡ್ಡಿದ ಪರಿಸ್ಥಿತಿಯಿಂದಾಗಿ ಕಲ್ಲಂಗಡಿಯನ್ನು ಮಾರುಕಟ್ಟೆಗೆ ಸಾಗಿಸುವಲ್ಲಿ ರೈತರು ಅಸಹಾಯಕರಾಗಿದ್ದಾರೆ. ಈ ನಡುವೆ, ಕಲ್ಲಂಗಡಿ ತಿಂದರೆ ಕೊರೋನಾ ಬರುತ್ತೆ ಎಂದು ಕೆಲ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಹಾಗಾಗಿ ಉತ್ತರ ಕರ್ನಾಟಕದ ಬಹಳಷ್ಟು ಕಡೆ ಕಲ್ಲಂಗಡಿ ತಿನ್ನಲು ಜನ ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣದಿಂದಾಗಿ ಕಲ್ಲಂಗಡಿಗೆ ಬೇಡಿಕೆ ಕುಸಿದಿದ್ದು ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ. ಇದರಿಂದಾಗಿ ಮಾರಾಟವೂ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ ಸಂಕಷ್ಟಕ್ಕೊಳಗಾದ ಕಲಬುರಗಿಯ ರೈತ ಆತ್ಮಹತ್ಯೆ ಮಾಡಿಕೊಂಡ ದುರಂತವೂ ಸಂಭವಿಸಿತ್ತು.

ಸಚಿವ ಸಚಿವ ಕೌರವ ಕೆಂಡ:

ರೈತರ ಸ್ಥತಿಗತಿ ತಿಳಿಯಲು ವಿಜಯಪುರಕ್ಕೆ ಭೇಟಿ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು, ಅನ್ನದಾತರ ಈ ಸಮಸ್ಯೆಯನ್ನು ಆಲಿಸಿದರು. ವಿಜಯಪುರ ಜಿಲ್ಲೆಯಲ್ಲಿ‌ ಕಲ್ಲಂಗಡಿ ಬೆಳೆ ಉತ್ತಮವಾಗಿ ಬಂದಿದೆ.‌ ಆದರೆ ಕಲ್ಲಂಗಡಿ ತಿಂದರೆ ರೋಗ ಬರುತ್ತದೆ ಎಂದು ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದಾರೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಕಲ್ಲಂಗಡಿ ತಿಂದರೆ ಕೊರೋನಾ ಬರುತ್ತದೆಂಬುದು ಸುಳ್ಳು. ಹೀಗೆ ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು  ಎಚ್ಚರಿಕೆ ನೀಡಿದರು.  ಕಲ್ಲಂಗಡಿ, ಸೌತೆಕಾಯಿ ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ‌ ಎಂದು ವೈದ್ಯರು ಹೇಳುತ್ತಾರೆ. ಆದರೂ ಕೆಲವು ಕಿಡಿಗೇಡಿಗಳು, ಕಲ್ಲಂಗಡಿ ತಿಂದರೆ ಕೊರೋನಾ ಬರುತ್ತದೆ ಅಂತ ಅಪಪ್ರಚಾರ ಮಾಡಿದ್ದಾರೆ. ರೈತರಿಗೆ ಯಾರೇ ತೊಂದರೆ ಮಾಡಿದಲ್ಲಿ ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಇದೆ ವೇಳೆ, ಕಲಬುರ್ಗಿಗೆ ಭೇಟಿ ನೀಡಿದ ವೇಳೆ,  ಆತ್ಮಹತ್ಯೆ ಮಾಡಿಕೊಂಡಿದ್ದ ಲಾಡ್ ಚಿಂಚೋಳಿಯ ಕಲ್ಲಂಗಡಿ ಬೆಳೆಗಾರ ಚಂದ್ರಕಾಂತ್ ಬಿರಾದರ್ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸದಸ್ಯರಿಗೆ  5 ಲಕ್ಷ ರೂಪಾಯಿ ಪರಿಹಾರದ ಚೆಕ್ ಹಾಗೂ ವೈಯಕ್ತಿಕವಾಗಿ 1ಲಕ್ಷ ರೂಪಾಯಿ ಪರಿಹಾರ ವಿತರಿಸಿದರು. ಜೊತೆಗೆ ವಿಧವಾ ವೇತನದ ಆದೇಶದ ಪ್ರತಿ, ಹಾಗೂ ಅಂತ್ಯ ಸಂಸ್ಕಾರದ 5 ಸಾವಿರ ರೂಪಾಯಿ  ಚೆಕ್ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

Related posts