ಅಸಹಾಯಕರಿಗೆ ನೆರವು; ಕರಾವಳಿ ಕಾಲೇಜು ಸೇನಾನಿಗಳ ಕೈಂಕರ್ಯ

ಲಾಕ್ ಡೌನ್ ಸಂದರ್ಭದಲ್ಲಿ ಅಸಹಾಯಕರಿಗೆ ಅನ್ನ ಆಹಾರ ನೀಡುವುದೇ ಒಂದು ಸಮಾಜಮುಖಿ ಕೆಲಸ. ಅದರಲ್ಲೂ ಜೀವ ಸಂಜೀವಿನಿಯಾಗುವುದು ಮಾದರಿ ಕಾರ್ಯ.. ಇದು ಮಹಾ ಕೈಂಕರ್ಯ..

ಮಂಗಳೂರು: ಕೊರೋನಾ ಹಾವಳಿಯಿಂದ ಜನ ತತ್ತರಗೊಂಡಿದ್ದಾರೆ. ಹಲವು ದಿನಗಳ ಲಾಕ್ ಡೌನ್ ಕಾರಣದಿಂದಾಗಿ ಹೈರಾಣಾಗಿದ್ದಾರೆ. ಕೆಲಸವಿಲ್ಲದ ಅವೆಷ್ಟೋ ಮಂದಿ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಘ ಸಂಸ್ಥೆಗಳು, ಸಮಾಜ ಸೇವಕರು ಆಹಾರ ಸಾಮಾಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.

ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕರಾವಳಿ ಕಾಲೇಜು ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಸೇನೆ ಕಾರ್ಯಾಚರಣೆಗಿಳಿಯುವ ರೀತಿಯಲ್ಲಿ ಕರಾವಳಿ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆ ಸಮಾಜಮುಖಿ ಕೆಲಸದಲ್ಲಿ ತೊಡಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಅಸಹಾಯಕರಾಗಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರಿಗೆ ಪಡಿತರ ಸಾಮಾಗ್ರಿಗಳ ಕಿಟ್ ವಿತರಿಸುವ ಮೂಲಕ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ಅವರು ಗಮನಸೆಳೆದಿದ್ದಾರೆ.

ತಮ್ಮ ಶಿಕ್ಷಣ ಸಂಸ್ಥೆಯ ಸಿಬ್ಬಂದಿಯನ್ನೊಳಗೊಂಡ ಸ್ವಯಂಸೇವಕರು ಹತ್ತಾರು ತಂಡಗಳಲ್ಲಿ ವಿತರಣಾ ಕಾರ್ಯ ಕೈಗೊಂಡಿದ್ದಾರೆ. ತಮ್ಮ ಕರಾವಳಿ ಇಂಜಿನೀಯರಿಂಗ್ ಕಾಲೇಜ್ ಇರುವ ಮಂಗಳೂರಿನ ನೀರುಮಾರ್ಗ ಸುತ್ತಮುತ್ತಲ ಪ್ರದೇಶ, ಕರಾವಳಿ ನರ್ಸಿಂಗ್ ಕಾಲೇಜ್ ಇರುವ ವಾಮಂಜೂರು ಸುತ್ತಮುತ್ತಲ ಹಳ್ಳಿಗಳು, ಕರಾವಳಿ ಫ್ಯಾಷನ್ ಡಿಸೈನಿಂಗ್ ಕಾಲೇಜ್ ಇರುವ ಕೊಟ್ಟಾರ, ದೇರೆಬೈಲ್, ಕೂಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮೊತ್ತದ ಕಿಟ್’ಗಳನ್ನು ಗಣೇಶ ರಾವ್ ತಂಡ ವಿತರಿಸಿದೆ. ಈ ಕಿಟ್‌ನಲ್ಲಿ ಕುಚ್ಚಲಕ್ಕಿ, ಚಾ ಹುಡಿ, ಈರುಳ್ಳಿ, ತೊಗರಿ ಬೇಳೆ, ಸಕ್ಕರೆ ಸಹಿತ ಅಗತ್ಯ ವಸ್ತುಗಳಿವೆ.  ತೊಕ್ಕೊಟ್ಟು, ಕದ್ರಿ, ಕಾವೂರು ಸಹಿತ ವಿವಿಧ ಸಂಘಗಳು ಕೈಗೊಂಡಿರುವ ಸಾಮಾಜಿಕ ಕೈಂಕರ್ಯಕ್ಕೆ ಭಾರೀ ಮೊತ್ತದ ಹಣಕಾಸು ನೆರವನ್ನೂ ಗಣೇಶ್ ರಾವ್ ನೀಡಿದ್ದಾರೆ.

ಈ ನಡುವೆ,  ನೀರುಮಾರ್ಗ ಬಳಿ ಆಯೋಜಿಸಲಾದ ಶಿಬಿರ ನೂರಾರು ಕುಟುಂಬಗಳಿಗೆ ವರದಾನವಾಯಿತು.  ಮಂಗಳೂರು ತಾ.ಪಂ. ಮಾಜಿ ಅಧ್ಯಕ್ಷ ಗೋಕುಲ್‌ದಾಸ್‌ ಶೆಟ್ಟಿ, ನೀರುಮಾರ್ಗ ಗ್ರಾ.ಪಂ ಅಧ್ಯಕ್ಷರಾದ ಕಸ್ತೂರಿ, ಸದಸ್ಯರಾದ ಸಚಿನ್‌ ಹೆಗ್ಡೆ, ಚೇತನ್‌ ಕುಮಾರ್‌, ರಾಮ ಕರ್ಕೇರಾ ಸಮ್ಮುಖದಲ್ಲಿ 180ಕ್ಕೂ ಹೆಚ್ಚು ಕುಟುಂಬಗಳಿಗೆ ಪಡಿತರ ಕಿಟ್’ಗಳನ್ನು ಗಣೇಶ್ ರಾವ್ ವಿತರಿಸಿದರು. ಈ ಶಿಬಿರದಲ್ಲಿ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಶಿಕ್ಷಣ ತಜ್ಞ, ಕರಾವಳಿ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್, ಸಂಕಷ್ಟದ ಪರಿಸ್ಥಿತಿಯಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವ ಮೂಲಕ ಕೋವಿಡ್-19 ವಿರುದ್ದ  ಸಂಘಟಿತರಾಗಿ ಹೋರಾಡಿ ಗೆಲ್ಲೋಣ ಎಂದು ಕರೆ ನೀಡಿದರು.

ಆಪತ್ಕಾಲದಲ್ಲಿ ಸಂಜೀವಿನಿ

ಬಹುತೇಕ ಸಂಘ ಸಂಸ್ಥೆಗಳಂತೆ ಅಸಹಾಯಕರಿಗೆ ಪಡಿತರ ಸಾಮಾಗ್ರಿಗಳನ್ನು ವಿತರಿಸಿರುವ ಕರಾವಳಿ ಕಾಲೇಜ್, ಲಾಕ್ ಡೌನ್ ಸಂದರ್ಭದಲ್ಲಿ ವೈದ್ಯಕೀಯ ಸೌಲಭ್ಯವಂಚಿತರಾದವರ ನೆರವಿಗೂ ಧಾವಿಸಿದೆ.  ಅಸಹಾಯಕ ಸ್ಥಿತಿಯಲ್ಲಿರುವ ಮಂದಿಗೆ ಔಷಧಿ ವ್ಯವಸ್ಥೆ ಮಾಡಿ ಗಮನಸೆಳೆದಿದೆ.

ಪ್ರಸ್ತುತ ದಿನಗಳಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಬಡವರ ಆಹಾರ ಸಮಸ್ಯೆ ಬಗೆಹರಿಯಲು ಪ್ರಯತ್ನ ಮಾಡುತ್ತಿವೆ. ಆದರೆ ಸಕ್ಕರೆ ಕಾಯಿಲೆ, ಕಿಡ್ನಿ ಸಮಸ್ಯೆ, ದೃಷ್ಟಿ ಹೀನತೆ, ರಕ್ತದೊತ್ತಡ ಹಾಗೂ ವಯೋ ಸಹಜ ಕಾಯಿಲೆಯಿರುವ ಮಂದಿಗೆ ನಿರ್ದಿಷ್ಟ ಔಷಧಿಯೇ ಬೇಕಾಗುತ್ತೆ. ಆದರೆ ಲಾಕ್’ಡೌನ್ ಪರಿಸ್ಥಿತಿಯಲ್ಲಿ ಮೆಡಿಕಲ್ ಶಾಪ್ ತೆರೆದಿದ್ದರೂ ಔಷಧಿ ಪೂರೈಕೆಯಾಗುತ್ತಿಲ್ಲ. ಇಂತಹಾ ಸಂದರ್ಭದಲ್ಲಿ ಅಸಹಾಯಕರನ್ನು ಗುರುತಿಸಿ ಅವರಿಗೆ ಅಗತ್ಯ ಔಷದಿ ಒದಗಿಸುವ ಕೆಲಸದಲ್ಲಿ ತೊಡಗಿರುವುದು  ಪ್ರಶಂಸಾರ್ಹ. ಕರಾವಳಿ ಕಾಲೇಜು ಮಾಲೀಕತ್ವದ, ಬೆಂಗಳೂರಿನ ಯಲಹಂಕ ಬಳಿ ಇರುವ ರಾಮಕೃಷ್ಣ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಈ ವಿಚಾರದಲ್ಲಿ ಅಸಹಾಯಕರಿಗೆ ನೇರವಾಗಿ ನಿಂತಿದೆ.

ಇದನ್ನೂ ಓದಿ.. ಕೊರೋನಾದಿಂದ ಭಾರೀ ಅನಾಹುತ; ಭಾರೀ ಚರ್ಚೆಗೆ ನಾಂದಿಹಾಡಿತೇ ಕೋಡಿಹಳ್ಳಿ ಶ್ರೀಗಳ ಭವಿಷ್ಯವಾಣಿ

Related posts