ದೆಹಲಿ: ಮಾರಕ ವೈರಾಣುಗೆ ಜಾತಿ ವ್ಯಾಮೋಹವಿಲ್ಲ, ಗಡಿ, ಸೀಮೆಯ ಒಲವೂ ಇಲ್ಲ. ಹಾಗಾದ ಮೇಲೆ ಸರ್ಕಾರ ಅಥವಾ ಜನ ಎನ್ನುವ ತಾರತಮ್ಯ ಇರುತ್ತಾ? ಅದರಲ್ಲೂ ಭದ್ರತೆ ಎನ್ನುವ ಅಡ್ಡಿಯಂತೂ ಇಲ್ಲವೇ ಇಲ್ಲ. ರಾಷ್ಟ್ರಪತಿ ಭವನ ಬಳಿಗೂ ಕೊರೊವಾ ವೈರಸ್ ಹೊಕ್ಕಿದ್ದು ಆ ಪ್ರದೇಶದಲ್ಲೀಗ ಆತಂಕ ಮನೆ ಮಾಡಿದೆ.
ರಾಷ್ಟ್ರಪತಿ ಭವನದ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ ಎನ್ನಲಾಗುತ್ತಿದೆ. ವಾರದ ಹಿಂದಷ್ಟೇ ಕೊರೋನಾ ಸೋಂಕಿಗೆ ಮೃತಪಟ್ಟಿದ್ದ ಮಹಿಳೆಯ ಮಗ ರಾಷ್ಟ್ರಪತಿ ಭವನದಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದರು. ಇದೀಗ ಅವರ ಮನೆಯನ್ನು ಸೀಲ್ಡೌನ್ ಮಾಡಲಾಗಿದ್ದು, ಇಡೀ ಕುಟುಂಬವನ್ನು ಹೋಂ ಕ್ವಾರಂಟೈನ್ ನಲ್ಲಿಡಲಾಗಿದೆ. ಅವರಷ್ಟೇ ಅಲ್ಲ ಅಕ್ಕಪಕ್ಕದ ಕೆಲವು ಮನೆಗಳ ಜನರನ್ನೂ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಅವರೆಲ್ಲರಿಗೂ ಸರ್ಕಾರದಿಂದಲೇ ಆಹಾರ ಪೂರೈಸಲಾಗುತ್ತಿದೆ.
ರಾಷ್ಟ್ರ ರಾಜಧಾನಿ ದೆಹಲಿ ಕೂಡಾ ದೇಶದ ಹಲವು ಕೊರೋನಾ ಹಾಟ್’ಸ್ಪಾಟ್’ಗಳಲ್ಲಿ ಒಂದು. ದೆಹಲಿಯಲ್ಲಿ ಕೂಡಾ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಆದರೂ ಮಾರಣಾಂತಿಕ ವೈರಸ್ ರಾಷ್ಟ್ರಪತಿ ಭವನದಲ್ಲೂ ತಲ್ಲಣ ಸೃಷ್ಟಿಯಾಗಿದೆ.