ದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಮರಣ ಮೃದಂಗ ಭಾರಿಸುತ್ತಿರುವ ಈ ಚೀನೀ ವೈರಸ್ ಇದೀಗ ಸೇನೆಯ ಅಡ್ಡೆಗೂ ಲಗ್ಗೆ ಹಾಕಿದೆ. ಆತಂಕಕಾರಿ ಬೆಳವಣಿಗೆಯಲ್ಲಿ ಕೇಂದ್ರೀಯ ಮೀಸಲು ಪಡೆ ಸಿಬ್ಬಂದಿಯಲ್ಲೂ ಈ ವೈರಾಣು ವೇಗವಾಗಿ ಹರಡುತ್ತಿದ್ದು ಇದರಿಂದಾಗಿ ದೇಶದ ರಕ್ಷಣಾ ಕ್ಷೇತ್ರವೂ ಬೆಚ್ಚಿಬಿದ್ದಿದೆ.
ದೆಹಲಿ ಮಯೂರ್ ವಿಹಾರದಲ್ಲಿರುವ ಕೇಂದ್ರೀಯ ಮೀಸಲು ಪಡೆಯ 31ನೇ ಬೆಟಾಲಿಯನ್ ಪಡೆಯಲ್ಲಿ ಕೆಲ ದಿನಗಳಿಂದ ಈ ಸೋಂಕಿನ ತಳಮಳ ಸೃಷ್ಟಿಯಾಗಿತ್ತುಈ. ಯೋಧರನ್ನು ಪರೀಕ್ಷೆಗೊಳಪಡಿಸಿದಾಗ 46 ಯೋಧರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಅಷ್ಟೇ ಅಲ್ಲ ಒಬ್ಬ ಸೈನಿಕ ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿರುವ ಪ್ರಕರಣವೂ ಉತ್ಸಾಹಿ ಯೋಧರನ್ನು ಕಂಗಾಲಾಗಿಸಿದೆ. 55 ವರ್ಷದ ಯೋಧ ಕೆಲ ದಿನಗಳ ಹಿಂದೆ ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದರು. ಏಪ್ರಿಲ್ 21 ರಂದು ಕೊರೋನಾ ಸೋಂಕು ದೃಢಪಟ್ಟಿತ್ತು. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಈ ಯೋಧ ಸಾವನ್ನಪ್ಪಿದ್ದಾರೆಂದು ಮೂಲಗಳು ತಿಳಿಸಿವೆ.
ಈ ನಡುವೆ, ಸೋಂಕಿತ ಯೋಧರಿಗೆ ಮಂಡ್ವಾಲಿಯಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ 1,000ಕ್ಕೂ ಹೆಚ್ಚು ಯೋಧರನ್ನು ಕ್ವಾರಂಟೈನ್’ನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.