ಮಹಾ ಸಚಿವಾಲಯ ಕಟ್ಟಡ 3ನೇ ಮಹಡಿಯಿಂದ ಜಿಗಿದ ಡೆಪ್ಯುಟಿ ಸ್ಪೀಕರ್.. ವೀಡಿಯೋ ವೈರಲ್

ಮುಂಬೈ: ಮಹಾರಾಷ್ಟ್ರ ಸರ್ಕಾರದ ಆಡಳಿತ ಶಕ್ತಿಕೇಂದ್ರ ಮಂತ್ರಾಲಯ ಇಂದು ಕೋಲಾಹಲದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರು ಮಂತ್ರಾಲಯ ಕಟ್ಟಡದಿಂದ ಮೂರನೇ ಮಹಡಿಯಿಂದ ಜಿಗಿದ ಪ್ರಸಂಗ ಆತಂಕ ಸೃಷ್ಟಿಸಿತು.

  ಮಹಾರಾಷ್ಟ್ರ ರಾಜ್ಯದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಬಣದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಶಾಸಕ ಹಾಗೂ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರು ಶುಕ್ರವಾರ ಮಹಾರಾಷ್ಟ್ರದ ಸಚಿವಾಲಯ ಕಟ್ಟಡದ ಛಾವಣಿಯಿಂದ ಜಿಗಿದಿದ್ದಾರೆ. ಕೆಳಗೆ ಸುರಕ್ಷತಾ ನೆಟ್ ಅಳವಡಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಧಂಗರ್ ಸಮುದಾಯವನ್ನು ಎಸ್ಸಿಗೆ ಸೇರಿಸಬೇಕು ಎಂದು ಒತ್ತಾಯಿಸುತ್ತಿರುವ ನರಹರಿ ಜಿರ್ವಾಲ್ ಅವರು ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದರು. ಆದರೆ ಅವರ ಭೇಟಿ ಸಾಧ್ಯವಾಗಲಿಲ್ಲ. ಶುಕ್ರವಾರವೂ ಸಿಎಂ ಭೇಟಿಗೆ ತೆರಳಿದ್ದು ಆಗಲೂ ಅವಕಾಶ ಸಿಗಲಿಲ್ಲ. ಇದರಿಂದ ಕುಪಿತರಾದ ಶಾಸಕರು ಕಟ್ಟಡದಿಂದ ಜಿಗಿದಿದ್ದಾರೆ ಎನ್ನಲಾಗಿದೆ.

ಛಾವಣಿಯಿಂದ ಕೆಳಗೆ ಜಿಗಿದ ನಂತರ ನೆಟ್ ನಲ್ಲಿ ಸಿಲುಕಿದ್ದ ನರಹರಿ ಜಿರ್ವಾಲ್ ಅವರನ್ನು ಪೊಲೀಸರು ರಕ್ಷಿಸಿ ಕರೆದೊಯ್ದಿದ್ದು, ಅವರನ್ನು ಕರೆದೊಯ್ಯುತ್ತಿರುವ ವೀಡಿಯೋ ವೈರಲ್ ಆಗಿದೆ.

Related posts