ಮಹಾಶಿವರಾತ್ರಿ ವೈಭವ; ಎಲ್ಲೆಲ್ಲೂ ವೃತ ಜಾಗರಣೆಯ ಕೈಂಕರ್ಯ

ಮಂಗಳೂರು: ನಾಡಿನೆಲ್ಲೆಡೆ ಶಿವರಾತ್ರಿ ಸಂಭ್ರಮ ಗರಿಗೆದರಿದೆ. ಆಸ್ತಿಕ ಬಂಧುಗಳು ಪರಮೇಶ್ವರನ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸುತ್ತಿರುವ ದೃಶ್ಯ ಎಲ್ಲೆಡೆ ಕಂಡುಬಂತು. ಮಹಾ ಶಿವರಾತ್ರಿಯ ಹಿನ್ನೆಲೆಯಲ್ಲಿ ಭಕ್ತರು ವ್ರತಾಚರಣೆ, ಜಾಗರಣೆಯ ಜತೆಗೆ ಶಿವ ದೇವಾಲಯಗಳಲ್ಲಿನ ಉತ್ಸವಗಳಲ್ಲಿ ಪಾಲ್ಗೊಂಡರು.

ದಕ್ಷಿಣ ಕನ್ನಡದ ಧರ್ಮಸ್ಥಳದಲ್ಲಿ ಮಂಜುನಾಥನಿಗೆ ಶಿವರಾತ್ರಿ ನಿಮಿತ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತಸಾಗರವು ಈ ವಿಶೇಷ ಕೈಂಕರ್ಯವನ್ನು ಸಾಕ್ಷೀಕರಿಸಿತು.


ಮಂಗಳೂರಿನ ಪುರಾಣ ಪ್ರಸಿದ್ಧ ಕದ್ರಿ ಮಂಜುನಾಥನ ದೇಗುಲ, ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿ, ಕರಾವಳಿ ದಸರಾದ ಕೇಂದ್ರಸ್ಥಾನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಗಳಲ್ಲೂ ವಿಶೇಷ ಪೂಜೆ, ಉತ್ಸವಗಳು ಗಮನ ಸೆಳೆದವು.

ಉತ್ತರಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಪ್ರವಾಸಿಗರ ದಂಡೇ ಜಮಾಯಿಸಿತ್ತು. ಮುರುಡೇಶ್ವರದಲ್ಲೂ ಶಿವನಿಗಾಗಿ ವಿಶೇಷ ಉತ್ಸವ ನೆರವೇರಿತು. ಕಡಲ ಮಧ್ಯದ ಈ ದೇಗುಲ ಶಿವರಾತ್ರಿ ವೈಭವದಿಂದಾಗಿ ಭಕ್ತಸಮೂಹದ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಶಿವರಾತ್ರಿಯ ಉಪವಾಸ ವ್ರತಾಚರಣೆ ಪಾಲನೆ ಮಾಡಿದ ಭಕ್ತರು ಬೆಳಗ್ಗಿನಿಂದಲೇ ದೇವಾಲಯಗಳಿಗೆ ತೆರಳಿ ಭಕ್ತಿ ಭಾವದಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ರಾತ್ರಿ ಭಜನೆ, ಜಾಗರಣೆಗಳನ್ನು ನಡೆಸಿ ಶಿವರಾತ್ರಿಯನ್ನು ಆಚರಿಸಿದರು.

Related posts