ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸರ್ಕಾರವನ್ನು ಕೆಡವಿ ತಮ್ಮನ್ನು ಅಧಿಕಾರಕ್ಕೆ ತರಲು ಕಾರಣರಾದ ವಲಸಿಗರೇ ಇದೀಗ ಬಿಜೆಪಿ ಪಾಲಿಗೆ ಸವಾಲಾಗಿದ್ದಾರೆ. ಕೆಲವು ದಿನಗಳ ಹಿಂದಿನವರೆಗೂ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದು ಕುಳಿತಿದ್ದ ಶಾಸಕರ ಬಗ್ಗೆ ಮೂಲ ಬಿಜೆಪಿಗರು ಅಸಮಾಧಾನ ಹೊರ ಹಾಕಿದ್ದರು. ವರಿಷ್ಠರ ಎಚ್ಚರಿಕೆಯ ಕಾರಣಕ್ಕಾಗಿ ಮೂಲ ಬಿಜೆಪಿಗರು ಮೌನಕ್ಕೆ ಶರಣಾಗಿದ್ದಾರೆ. ಆದರೆ ಜೆಡಿಎಸ್-ಕಾಂಗ್ರೆಸ್ ಪಕ್ಷಗಳಿಂದ ವಲಸೆ ಬಂದು ಇದೀಗ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ನಾಯಕರ ಬೇಡಿಕೆಗಳು ಕಡಿಮೆಯಾಗಿಲ್ಲ. ಇದುವೇ ಈಗ ಕಮಲಾ ಪಕ್ಷದಲ್ಲಿ ಬೇಗುದಿಗೆ ಕಾರಣವಾಗಿರೋದು.
ಈವರೆಗೂ ಮಂತ್ರಿಗಿರಿಗಾಗಿ ಹಠಕ್ಕೆ ಬಿದ್ದಿದ್ದ ರಮೇಶ್ ಜಾರಕಿಹೊಳಿ ಟೀಮ್ ಈಗ ಜಿಲ್ಲಾ ಉಸ್ತುವಾರಿ ಸ್ಥಾನಕ್ಕಾಗಿ ಸೆಣಸಾಡುತ್ತಿದೆ. ಈ ಬೆಳವಣಿಗೆ ಬಿಜೆಪಿಯಲ್ಲಿ ಮತ್ತೊಮ್ಮೆ ಮೂಲ ಹಾಗೂ ವಲಸಿಗರ ನಡುವೆ ಕಾದಾಟಕ್ಕೆ ಕಾರಣವಾಗುವ ಆತಂಕ ಸೃಷ್ಟಿಸಿದೆ.
ಮೂಲ ಬಿಜೆಪಿಗರ ಅಸಮಾಧಾನದ ನಡುವೆಯೂ ವಲಸಿಗರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಜಿಲ್ಲಾ ಉಸ್ತುವಾರಿಗಳ ಪಟ್ಟಿಯನ್ನು ಪರಿಷ್ಕರಿಸುತ್ತಾರೆಯೇ? ನೂತನ ಶಾಸಕರಿಗೆ ಜಿಲ್ಲಾ ಉಸ್ತುವಾರಿ ವಹಿಸುವ ತೀರ್ಮಾನ ಕೈಗೊಳ್ಳುವರೇ ಎಂಬ ಪ್ರಶ್ನೆ ಕೂಡಾ ಬಿಜೆಪಿಯಲ್ಲಿ ಹರಿದಾಡುತ್ತಿವೆ.
ಬೆಂಗಳೂರು ನಗರಕ್ಕಾಗಿ ನೂತನ ಸಚಿವರಾಗಿರುವ ಎಸ್.ಟಿ.ಸೋಮಶೇಖರ್ ಹಾಗೂ ಬೈರತಿ ಬಸವರಾಜ್ ಕಣ್ಣಿಟ್ಟಿದ್ದಾರೆ. ಇದು ಸಚಿವರಾದ ಆರ್.ಅಶೋಕ್ ಹಾಗೂ ಅಶ್ವತ್ಥನಾರಾಯಣ ಅವರನ್ನು ಕೆಣಕುವಂತೆ ಮಾಡಿದೆ. ಬೆಳಗಾವಿಯನ್ನು ಪ್ರತಿನಿಧಿಸುತ್ತಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿಯವರದ್ದೂ ಅದೇ ಪರಿಸ್ಥಿತಿ. ರಮೇಶ್ ಜಾರಕಿಹೊಳಿ ಅವರ ಪ್ರಯತ್ನ ಲಕ್ಷ್ಮಣ್ ಸವದಿಯವರಿಗೆ ಎಂದಿಲ್ಲದ ಸವಾಲಾಗಿದೆ.
ಅತ್ತ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉಸ್ತುವಾರಿಯಾಗಿರುವ ಜಿಲ್ಲೆಯನ್ನೇ ಪ್ರತಿನಿಧಿಸುತ್ತಿರುವ ಬಿ.ಸಿ.ಪಾಟೀಲ್ ಅವರು ಹಾವೇರಿ ಜಿಲ್ಲೆಗಾಗಿ ಪಟ್ಟು ಹಿಡಿದಿದ್ದಾರೆ. ಹಾವೇರಿ ಸಾಧ್ಯವಿಲ್ಲವೆಂದಾದರೆ ಗದಗ್ ಜಿಲ್ಲೆಯ ಉಸ್ತುವಾರಿಯನಾಗಿ ಮಾಡಿ ಎಂದು ಬಿ.ಸಿ.ಪಾಟೀಲ್ ಬೇಡಿಕೆ ಮುಂದಿಟ್ಟಿದ್ದಾರೆ. ಇದು ಸಿ.ಸಿ.ಪಾಟೀಲ್ ಅವರ ಸಹನೆಯನ್ನೂ ಪ್ರಶ್ನಿಸುವಂತಿದೆ.
ಶ್ರೀರಾಮುಲು ಪ್ರತಿನಿಧಿಸುತ್ತಿರುವ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಗಿಟ್ಟಿಸಿಕೊಳ್ಳಲು ಸಚಿವ ಆನಂದ್ ಸಿಂಗ್ ನಿರಂತರ ಪ್ರಯತ್ನದಲ್ಲಿದ್ದಾರೆ.
ಮಂಡ್ಯ ಜಿಲ್ಲೆಯ ಉಸ್ತುವಾರಿ ಈ ವರೆಗೂ ಆರ್.ಅಶೋಕ್ ಕೈಯ್ಯಲ್ಲಿದ್ದು, ಈಗ ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಏಕೈಕ ಬಿಜೆಪಿ ಶಾಸಕ ನಾರಾಯಣಗೌಡರಿಗೆ ಆ ಜವಾಬ್ದಾರಿ ವಹಿಸುವ ಸಾಧ್ಯತೆಗಳೇ ಹೆಚ್ಚು. ಹಾಗೊಂದು ವೇಳೆ ನಾರಾಯಣಗೌಡರಿಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ನೀಡಿದರೆ ಅಶೋಕ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿಗಷ್ಟೇ ಸೀಮಿತರಾಗುತ್ತಾರೆ. ಒಂದು ವೇಳೆ ಬೆಂಗಳೂರು ನಗರ ಜಿಲ್ಲೆ ಸಿಗದಿದ್ದರೆ ಬೆಂಗಳೂರು ಗ್ರಾಮಾಂತರ ಕೊಡಿ ಎಂದು ಎಸ್.ಟಿ.ಸೋಮಶೇಖರ್ ಬೇಡಿಕೆ ಇಟ್ಟಿದ್ದಾರೆ. ಹಾಗಾಗಿ ಅಶೋಕ್ ಅವರು ಚಿಂತಾಕ್ರಾಂತರಾಗಿದ್ದಾರೆ.
ಸಚಿವ ಸುಧಾಕರ್ ಅವರು ತವರು ಜಿಲ್ಲೆಯೇ ತಮಗೆ ಬೇಕು ಎಂದು ಪಟ್ಟು ಬಿಡುತ್ತಿಲ್ಲ. ಒಂದು ವೇಳೆ ಸಿಎಂ ಅವರು ಈ ಬೇಡಿಕೆಗೆ ಅಸ್ತು ಎಂದರೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಚಿಕ್ಕಬಳ್ಳಾಪುರವನ್ನು ಬಿಟ್ಟುಕೊಡಲೇಬೇಕಾಗುತ್ತದೆ. ಶ್ರೀಮಂತ ಪಾಟೀಲ್ ವಿಜಯಪುರಕ್ಕೂ ಪ್ರಯತ್ನಿಸುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆ ಕೂಡಾ ನೂತನ ಸಚಿವ ಶಿವರಾಂ ಹೆಬ್ಟಾರ್ ಅವರಿಗೆ ಒಲಿದರೆ, ಶಶಿಕಲಾ ಜೊಲ್ಲೆ ಅವರಿಂದ ಆ ಜಿಲ್ಲೆ ಕೈತಪ್ಪಲಿದೆ.
ಹೀಗೊಂದು ವೇಳೆ ತೀರ್ಮಾನ ಕೈಗೊಂಡರೆ ಸಿಎಂ ಯಡಿಯೂರಪ್ಪ ವಿರುದ್ಧ ಮೂಲ ಬಿಜೆಪಿಗರು ಸಿಡಿದೇಳುವ ಸಾಧ್ಯತೆಗಳೇ ಹೆಚ್ಚಿವೆ.