ಪುರಭವನ ಬಳಿ ಇನ್ನು ಮುಂದೆ ಪ್ರತಿಭಟನೆಗೆ ಅವಕಾಶವಿಲ್ಲ

ಬೆಂಗಳೂರು: ಪ್ರತಿಭಟನೆಯ ಹೆಸರಲ್ಲಿ ಜನಸಾಮಾನ್ಯರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಬೆಂಗಳೂರು ಮಹಾನಗರ ಪಾಲಿಕೆ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಬೆಂಗಳೂರಿನ ಪುರಭವನ ಬಳಿ ಇನ್ನು ಮುಂದೆ ಯಾವುದೇ ಪ್ರತಿಭಟನೆಯಂತಹ ಚಟುವಟಿಕೆಗಳಿಗೆ ಅನುಮತಿ ನೀಡದಿರಲು ಬಿಬಿಎಂಪಿ ನಿರ್ಧರಿಸಿದೆ.

ಬಹು ಕಾಲದಿಂದಲೇ ಪುರಭವನದ ಮುಂದೆ ಪ್ರತಿಭಟನೆಗಳು ನಡೆಯುತ್ತಿದ್ದವು. ಇದರಿಂದಾಗಿ ಸಾರ್ವಜನಿಕರು ತೀವ್ರ ಕಿರುಕುಳ ಅನುಭವಿಸುತ್ತಿದ್ದರು. ಪುರಭವನ ಬಳಿ ಪ್ರತಿಭಟನೆ ನಡೆದಾಗಲೆಲ್ಲಾ ಸಮೀಪದ ರಸ್ತೆಗಳಲ್ಲಿ ವಾಹನ ಸಂಚಾರ ಏರುಪೇರಾಗುತ್ತಿತ್ತು. ಈ ಕುರಿತಂತೆ ಜನಸಾಮಾನ್ಯರಿಂದ ದೂರುಗಳ ಮಹಾಪೂರವೇ ಹರಿದುಬರುತ್ತಿತ್ತು.

ಕೆಲ ದಿನಗಳಿಂದೀಚೆಗೆ ನಡೆಯುತ್ತಿರುವ ಪೌರತ್ವ ವಿರೋಧಿ ಹೋರಾಟಗಳಿಂದಾಗಿ ಬೆಂಗಳೂರಿನ ಪುರಭವನದ ಎದುರು ಅಹಿತಕರ ಪ್ರಸಂಗಗಳೇ ನಡೆಯುತ್ತಿದ್ದವು. ಹಣ ಪಾವತಿಸಿ ಪುರಭವನದ ಸಭಾಂಗಣದಲ್ಲಿ ಸಭೆ ಸಮಾರಂಭ, ಕಾರ್ಯಕ್ರಮ ಆಯೋಜಿಸಿದವರೂ ತೊಂದರೆ ಅನುಭವಿಸುತ್ತಿದ್ದರು. ಹಾಗಾಗಿ ಜನರು ಪುರಭವನವನ್ನು ಕಾಯ್ದಿರಿಸಲು ಹಿಂದೇಟು ಹಾಕುತ್ತಿದ್ದಾರೆ. ಸುಂದರ ಸಮಾರಂಭಗಳಿಗೆ ಅವಕಾಶ ನೀಡಬೇಕಾದ ಟೌನ್ ಹಾಲ್ ಪ್ರತಿಭಟನೆಗಳಿಗೆ ಸೀಮಿತವಾಗಿವೆಯೇ ಎಂಬ ಟೀಕೆಗಳೂ ಕೇಳಿಬರುತ್ತಿದ್ದವು.

ಈ ಎಲ್ಲ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗನಿರುವ ಬಿಬಿಎಂಪಿ, ಇನ್ನು ಮುಂದೆ ಟೌನ್ ಹಾಲ್ ಬಳಿ ಪ್ರತಿಭಟನೆಗೆ ಅವಕಾಶ ಕಲ್ಪಿಸದಿರುವ ತೀರ್ಮಾನ ಕೈಗೊಂಡಿದೆ.

Related posts