ಕೊರೋನಾ ಸಂದರ್ಭದಲ್ಲಿ ದಿನಕ್ಕೊಂದು ನಿಯಮ ಜಾರಿಗೆ ಬರುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿರುವುದರಿಂದ ಲಾಕ್’ಡೌನ್ ಮುಗಿಯುವವರೆಗೂ ಬೈಕಿನಲ್ಲಿ ಇನ್ನು ಮುಂದೆ ಒಬ್ಬ ಮಾತ್ರ ಹೋಗಬಹುದು. ರಿಕ್ಷಾ, ಕಾರು, ಜೀಪ್’ಗಳಲ್ಲಿ ಚಾಲಕ ಸೇರಿ ಇಬ್ಬರು ಮಾತ್ರ ಪ್ರಯಾಣಿಸಬಹುದು.
ಬೆಂಗಳೂರು: ಇನ್ನು ಮುಂದೆ ಬೈಕಿನಲ್ಲಿ ಒಬ್ಬರೇ ತೆರಳಬೇಕು. ಒಬ್ಬರಿಗಿಂತ ಹೆಚ್ಚು ಮಂದಿ ದ್ವಿಚಕ್ರ ವಾಹನದಲ್ಲಿ ರೈಡ್ ಮಾಡ್ತಾ ಇದ್ದರೆ ಗಾಡಿ ಸೀಜ್.. ಮಾತ್ರವಲ್ಲ ಪೊಲೀಸ್ ಕೇಸ್..
ಹೌದು, ಈ ವರೆಗೆ ಹೆಲ್ಮೆಟ್ ಇಲ್ಲದೆ ಬೈಕಿನಲ್ಲಿ ತೆರಳಿದಾಗ ಪೊಲೀಸರು ತಡೆಯುತ್ತಿದ್ದರು. ಒಂದು ವೇಳೆ ಹಿಂಬದಿ ಸವಾರರು ಹೆಲ್ಮೆಟ್ ಧರಿಸದಿದ್ದರೂ ಫೈನ್ ಹಾಕುತ್ತಿದ್ದರು. ಇನ್ನು ಮುಂದೆ ಹೆಲ್ಮೆಟ್ ಧರಿಸುತ್ತೇನೆಂದರೂ ಹಿಂಬದಿ ಸವಾರರಿಗೆ ಅವಕಾಶ ಇಲ್ಲ.
ಪ್ರಸ್ತುತ ಕೊರೋನಾ ಹಾವಳಿ ಕಾರಣಕ್ಕಾಗಿ ದೇಶದೆಲ್ಲೆಡೆ ಲಾಕ್’ಡೌನ್ ಜಾರಿಯಲ್ಲಿದೆ. ಮೇ 3ರವರೆಗೂ ಲಾಕ್’ಡೌನ್ ವಿಸ್ತರಿಸಿರುವ ಕೇಂದ್ರ ಸರ್ಕಾರ ಈ ಅವಧಿಯಲ್ಲಿ ಅಗತ್ಯ ಸೇವೆಗಷ್ಟೇ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ ಕೂಡಾ ಕೆಲ ಷರತ್ತು ವಿಧಿಸಿ ಅನುಮತಿ ನೀಡಲಾಗುತ್ತಿದೆ. ಆ ಪೈಕಿ ದ್ವಿಚಕ್ರ ವಾಹನದಲ್ಲಿ ಇನ್ನು ಮುಂದೆ ಒಬ್ಬರು ಮಾತ್ರ ಸವಾರಿ ಮಾಡಬಹುದಾಗಿದೆ. ಈ ರೀತಿ ಕೇಂದ್ರ ಸರ್ಕಾರ ಗೈಡ್ಲೈನ್ ಹೊರಡಿಸಿದೆ. ಕೊರೋನಾ ವೈರಸ್ ಶರವೇಗದಲ್ಲಿ ಹರಡುತ್ತಿರುವುದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲೇಬೇಕೆಂಬ ನಿಯಮ ಜಾರಿಗೊಳಿಸಿ ಈ ರೀತಿ ಕ್ರಮ ಕೈಗೊಂಡಿದೆ.
ದ್ವಿಚಕ್ರ ವಾಹನವಷ್ಟೇ ಅಲ್ಲ, ಆಟೋ ರಿಕ್ಷಾದಲ್ಲಿ ಚಾಲಕ ಸೇರಿ ಇಬ್ಬರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ. ಕಾರು ಮತ್ತು ಜೀಪ್’ಗಳಲ್ಲಿ ಕೂಡಾ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿ ಮಾತ್ರ ಪ್ರಯಾಣಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯದ ಹಲವೆಡೆ ಈ ಸಂಬಂಧ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.