ಡಾರ್ಕ್‌ಸ್ಟೋರ್‌ಗಳಲ್ಲಿ ₹3 ಕೋಟಿಗೂ ಅಧಿಕ ಅವಧಿ ಮೀರಿದ ಉತ್ಪನ್ನ ವಶ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಚಿವ ಯು.ಟಿ. ಖಾದರ್

ಬೆಂಗಳೂರು: ಬೆಂಗಳೂರಿನ ವಿವಿಧ ಡಾರ್ಕ್‌ಸ್ಟೋರ್‌ಗಳಲ್ಲಿ ಅವಧಿ ಮೀರಿದ, ತಪ್ಪಾಗಿ ಬ್ರಾಂಡ್ ಮಾಡಲಾದ ಆಹಾರ ಉತ್ಪನ್ನಗಳು ಹಾಗೂ ಅಗತ್ಯ ಪರವಾನಗಿ ಇಲ್ಲದೆ ಸಂಗ್ರಹಿಸಿದ್ದ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ₹3 ಕೋಟಿಗೂ ಅಧಿಕವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಆರೋಗ್ಯ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಕರ್ತರೊಬ್ಬರು ನೀಡಿದ ಮಾಹಿತಿ ಮತ್ತು ದಾಖಲೆಗಳ ಆಧಾರದ ಮೇಲೆ ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಪ್ರಮುಖ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಿಗೆ ಸಂಬಂಧಿಸಿದ ಡಾರ್ಕ್‌ಸ್ಟೋರ್‌ಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿದರು ಎಂದು ಹೇಳಿದರು.

ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ಅವಧಿ ಮೀರಿದ ಆಹಾರ ಮತ್ತು ಔಷಧ ಪದಾರ್ಥಗಳ ಸಂಗ್ರಹಣ ಘಟಕಗಳ ಮೇಲೆ ನಡೆಸಿದ ದಾಳಿ ಕುರಿತಂತೆ ಸಾರ್ವಜನಿಕರಿಗೆ ಹಾಗೂ ಮಾಧ್ಯಮಗಳಿಗೆ ಮಾಹಿತಿ ನೀಡಲು ಆರೋಗ್ಯ ಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯ ವಿಡಿಯೋ ಇಲ್ಲಿದೆ. pic.twitter.com/aJPduV4jmK

— UT Khader (@utkhader) September 9, 2026

ಲಿಂಗರಾಜಪುರಂ, ಹೊಸಕೋಟೆ ಘಟಕ ಬಂದ್‌

ತಪಾಸಣೆ ವೇಳೆ ಅವಧಿ ಮೀರಿದ ಆಹಾರ ಉತ್ಪನ್ನಗಳು, ತಪ್ಪಾಗಿ ಲೇಬಲ್ ಮಾಡಲಾದ ವಸ್ತುಗಳು ಹಾಗೂ ಅಗತ್ಯ ಪರವಾನಗಿ ಇಲ್ಲದೆ ಸಂಗ್ರಹಿಸಿದ್ದ ಔಷಧಗಳು ಪತ್ತೆಯಾಗಿವೆ. ಲಿಂಗರಾಜಪುರಂನ ಲಿಯೋ 7 ಎಂಟರ್‌ಪ್ರೈಸಸ್‌ ಘಟಕ ಮತ್ತು ಹೊಸಕೋಟೆಯ ಇನ್‌ಸ್ಟಾಮಾರ್ಟ್‌ ಸೌಲಭ್ಯದಲ್ಲಿ ಗಂಭೀರ ಉಲ್ಲಂಘನೆಗಳು ಕಂಡುಬಂದ ಹಿನ್ನೆಲೆಯಲ್ಲಿ ಎರಡೂ ಘಟಕಗಳನ್ನು ತಕ್ಷಣ ಮುಚ್ಚಲು ಆದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕಳೆದ ಒಂದು ತಿಂಗಳಿಂದ ಹೋಟೆಲ್‌, ರೆಸ್ಟೋರೆಂಟ್‌, ಕ್ಲಬ್‌ ಹಾಗೂ ಆಹಾರ ಕೇಂದ್ರಗಳ ಮೇಲೆ ಇಲಾಖೆ ನಿರಂತರ ನಿಗಾ ಇರಿಸಿದೆ. ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ತರುವ ಯಾವುದೇ ಅಕ್ರಮವನ್ನು ಸರ್ಕಾರ ಸಹಿಸುವುದಿಲ್ಲ ಎಂದರು.

ಔಷಧಗಳ ಅಕ್ರಮ ಆನ್‌ಲೈನ್‌ ಮಾರಾಟಕ್ಕೂ ಕಡಿವಾಣ

ಅವಧಿ ಮೀರಿದ ಅಥವಾ ಸರಿಯಾದ ಲೇಬಲ್‌ ಮತ್ತು ಮುಕ್ತಾಯ ದಿನಾಂಕವಿಲ್ಲದ ಔಷಧಗಳ ಅಕ್ರಮ ಆನ್‌ಲೈನ್‌ ಮಾರಾಟದ ಕುರಿತು ದೂರುಗಳು ಬಂದಿವೆ. ಇಂತಹ ಪ್ರಕರಣಗಳ ವಿರುದ್ಧವೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ್‌ ಹೇಳಿದರು.

ಗಂಭೀರ ಉಲ್ಲಂಘನೆಗಳಲ್ಲಿ ತಪ್ಪಿತಸ್ಥರೆಂದು ಕಂಡುಬರುವವರ ವಿರುದ್ಧ ಕರ್ನಾಟಕ ಸರ್ಕಾರದ ಕಾನೂನು ಇಲಾಖೆಯೊಂದಿಗೆ ಸಮಾಲೋಚಿಸಿ ಅನ್ವಯವಾಗುವ ಕ್ರಿಮಿನಲ್‌ ಕಾನೂನುಗಳ ಅಡಿ ಮೊಕದ್ದಮೆ ಹೂಡಲಾಗುವುದು. ಅಲ್ಲದೆ, ಇಂತಹ ಅಕ್ರಮಗಳಲ್ಲಿ ಭಾಗಿಯಾಗಿರುವವರ ಪರವಾನಗಿ ರದ್ದುಪಡಿಸುವ ಹಾಗೂ ನೇರ ದಂಡನಾತ್ಮಕ ಕ್ರಮ ಕೈಗೊಳ್ಳುವ ಅಧಿಕಾರವನ್ನು ರಾಜ್ಯಗಳಿಗೆ ನೀಡುವಂತೆ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದರು.

ಅವಧಿ ಮೀರಿದ ಉತ್ಪನ್ನಗಳ ಮಾರಾಟ ಅಥವಾ ಸಂಗ್ರಹಣೆ ಕಂಡುಬಂದರೆ ಸಾರ್ವಜನಿಕರು ಮೌನವಾಗದೆ, ಇಲಾಖೆಯ QR/ಬಾರ್‌ಕೋಡ್ ಆಧಾರಿತ ದೂರು ವ್ಯವಸ್ಥೆಯ ಮೂಲಕ ತಕ್ಷಣ ಮಾಹಿತಿ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.

Related posts