ಬೆಳಗಾವಿ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಹಾರಾಷ್ಟ್ರದ ಜತೆ ಕೃಷ್ಣಾ ನದಿ ನೀರು ವಿನಿಮಯ ಮಾಡಿಕೊಳ್ಳುವ ಕುರಿತು ಶೀಘ್ರದಲ್ಲೇ ಬೆಂಗಳೂರಿನಲ್ಲಿ ಉಭಯ ರಾಜ್ಯಗಳ ಪ್ರತಿನಿಧಿಗಳ ಉನ್ನತ ಮಟ್ಟದ ಸಭೆ ನಡೆಯಲಿದೆ.
ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯದ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಸೋಮವಾರ ಗಟ್ಟಿ ಬಸವಣ್ಣ ಯೋಜನೆ ಕುರಿತ ಸಭೆ ನಡೆಸಿದ ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ, ಮಹಾರಾಷ್ಟ್ರ ಜತೆ ನೀರು ವಿನಿಮಯ ಕುರಿತು ಶೀಘ್ರದಲ್ಲಿಯೇ ಆ ರಾಜ್ಯದ ನೀರಾವರಿ ಸಚಿವರ ಜತೆ ಬೆಂಗಳೂರಿನಲ್ಲಿ ಚರ್ಚೆ ನಡೆಸಲಾಗುವುದು ಎಂದರು. ಆ ಸಭೆಯಲ್ಲಿ ಪರಸ್ಪರ ಚರ್ಚಿಸಿದ ಬಳಿಕವೇ ನೀರು ವಿನಿಮಯ ಕುರಿತು ಸರ್ಕಾರದ ತೀರ್ಮಾನ ಪ್ರಕಟಿಸಲಿದೆ ಎಂದು ಸಚಿವ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಜಲ ಆಯೋಗದ ಜತೆ ಚರ್ಚಿಸಿ, ಮನವರಿಕೆ ಮಾಡಬೇಕಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಸ್ಥಗಿತಗೊಳಿಸಿರುವುದರಿಂದ ರಸ್ತೆ ಮಾರ್ಗದ ಮೂಲಕವೇ ದೆಹಲಿಗೆ ತೆರಳುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಇದನ್ನೂ ಓದಿ.. ರಾಜ್ಯದ ಜನತೆಗೆ ಗುಡ್ ನ್ಯೂಸ್