ರಾಮಲಿಂಗ ರೆಡ್ಡಿಯವರಿಗೆ ಉನ್ನತ ಅಧಿಕಾರ ಸಿಗಲಿ.. ದೀಪಾವಳಿ ಸಂದರ್ಭದಲ್ಲಿ ಪೇಜಾವರ ಶ್ರೀ ಆಶೀರ್ವಚನ..

ಸಚಿವ ರಾಮಲಿಂಗ ರೆಡ್ಡಿಯವರಿಗೆ ಉನ್ನತ ಅಧಿಕಾರ ಸಿಗಲಿ.. ದೀಪಾವಳಿ ಸಂದರ್ಭದಲ್ಲಿ ಪೇಜಾವರ ಶ್ರೀ ಆಶೀರ್ವಚನ.. ದೇಗುಲಗಳ ವಿಚಾರದಲ್ಲಿ ಅಪೂರ್ವ ಸುಧಾರಣಾ ಕ್ರಮಗಳಿಗೆ ಮುನ್ನುಡಿ ಬರೆದ ಸಚಿವರಿಗೆ ಧಾರ್ಮಿಕ ಪ್ರಮುಖರ ಶ್ಲಾಘನೆ..

ಬೆಂಗಳೂರು: ನಾಡಿನಾದ್ಯಂತ ದೀಪಾವಳಿ ಸಂಭ್ರಮ ಸಡಗರದ ನಡುವೆ ಧಾರ್ಮಿಕ ಮಂದಿರಗಳಲ್ಲಿ, ಪುಣ್ಯ ಕ್ಷೇತ್ರಗಳಲ್ಲೂ ವಿವಿಧ ಕೈಕರ್ಯಗಳು ನೆರವೇರಿದವು. ಬೆಂಗಳೂರಿನ ಪೇಜಾವರ ಮಠದಲ್ಲಿ ಬೆಳಕಿನ ಹಬ್ಬ ಸಂದರ್ಭದ ಕೈಂಕರ್ಯ ಆಸ್ತಿಕವಲಯದ ಕೇಂದ್ರಬಿಂದುವಾಯಿತು.

ಸಾರಿಗೆ ಸಚಿವ ರಾಮಲಿ೦ಗಾರೆಡ್ಡಿ ಸಹಿತ ಗಣ್ಯರ ಭಾಗವಹಿಸುವಿಕೆ ಕೂಡಾ ಗಮನಸೆಳೆಯಿತು. ಮುಜರಾಯಿ ಖಾತೆಯನ್ನೂ ಹೊಂದಿರುವ ರಾಮಲಿಂಗಾರೆಡ್ಡಿಯವರು ಬೆ೦ಗಳೂರಿನ ಬಸವನಗುಡಿ ಸಮೀಪದ ವಿದ್ಯಾಪೀಠ ಸರ್ಕಲ್ ಬಳಿಯ ಪೇಜಾವರ ಮಠಕ್ಕೆ ಭೇಟಿ ನೀಡಿ ಗೋಪೂಜೆ ಮತ್ತು ಗೋವಿನ ಬೆಳ್ಳಿ ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ಮಂತ್ರಿ ರಾಮಲಿಂಗಾರೆಡ್ಡಿ ಅವರನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಗೌರವಿಸಿದ ಸನ್ನಿವೇಶವೂ ಗಮನಸೆಳೆಯಿತು. ರಾಜ್ಯದ ದೇಗುಲಗಳ ಅಭಿವೃದ್ಧಿ ವಿಚಾರದಲ್ಲಿ ಅಪೂರ್ವ ಸುಧಾರಣಾ ಕ್ರಮಗಳಿಗೆ ಮುನ್ನುಡಿ ಬರೆದ ಸಚಿವರ ನಡೆಯನ್ನು ಶ್ರೀಗಳು ಕೊಂಡಾಡಿದರು. ತುಲಾಭಾರ ಸೇವೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಕ್ಕಾಗಿ ಸಚಿವರಿಗೆ ಶ್ರೀಕೃಷ್ಣನ ಅನುಗ್ರಹ ಮತ್ತು ಆರೋಗ್ಯ ಆಯಸ್ಸು ಹಾಗೂ ಉನ್ನತ ಸ್ಥಾನಮಾನಗಳು ದೊರಕಲೆ೦ದು ಪ್ರಾರ್ಥಿಸಿ ಆಶೀರ್ವದಿಸಿದರು.

ಸಮಾರ೦ಭದಲ್ಲಿ ಡಾ.ಪ್ರಬ೦ಜನ್‌ ಆಚರ್ಯರು ಪ್ರವಚನ ನೀಡುವ ವೇಳೆ, ಮುಜರಾಯಿ ಸಚಿವರೂ ಆದ ಮಲಿಂಗಾರೆಡ್ಡಿಯವರಿಗೆ ಪ್ರಾಣಿಗಳ ಬಗ್ಗೆ ಇರುವ ಕಾಳಜಿಯನ್ನು ಕೊಂಡಾಡಿದರು. ಗೋ ಹತ್ಯೆ ಮಾತ್ರವಲ್ಲ ಯಾವ ಪ್ರಾಣಿ ಹತ್ಯೆ ಕೂಡ ಆಗಬಾರದು, ಪ್ರಪ೦ಚದಲ್ಲಿ 84 ಲಕ್ಷ ಜೀವರಾಶಿಗಳಿವೆ, ಪ್ರತಿಯೊ೦ದು ಜೀವರಾಶಿಗಳಿಗೂ ಬದುಕುವ ಹಕ್ಕಿದೆ ಎ೦ಬ ಸಚಿವರ ನಿಲುವನ್ನು ಶ್ಲಾಘಿಸಿದರು.

ರಾಮಲಿಂಗ ರೆಡ್ಡಿಯವರು ಮುಜರಾಯಿ ಸಚಿವರಾದ ಮೇಲೆ ಅನೇಕ ಪ್ರಗತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೃತಪಟ್ಟ ಅರ್ಚಕರ ಕುಟುಂಬದವರಿಗೆ ಎರಡು ಲಕ್ಷ ಪರಿಹಾರ ಹಾಗೂ ನಿವೃತ್ತರಾಗುವ ದೇವಸ್ಥಾನದ ನೌಕರರಿಗೆ-ಅರ್ಚಕರಿಗೆ 2 ಲಕ್ಷ ಇಡುಗ೦ಟು ಹಾಗೂ ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿರುವ ಬಗ್ಗೆ ಮತ್ತು ಅರ್ಚಕರಿಗೆ ಉಚಿತವಾಗಿ ಕಾಶಿಯಾತ್ರೆಗೆ ಪ್ರಯಾಣ ವ್ಯವಸ್ಥೆ ಮಾಡಿರುವ ಬಗ್ಗೆ ಸಂತಸ ವ್ಯಕಪಡಿಸಿದರು. ದೇವಸ್ಥಾನಗಳ ಅಭಿವೃದ್ಧಿ ಹಾಗೂ ಭಕ್ತರ ಅನುಕೂಲಕ್ಕೆ ಉನ್ನತ ವ್ಯವಸ್ಥೆಯನ್ನು ಮಾಡುತ್ತಿರುವ ಬಗ್ಗೆ ಅಪಾರವಾದ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಯಸಿ೦ಹ ಹಾಗೂ ನಿರ೦ಜನ್‌ ರಾವ್‌ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Related posts