₹3,000 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: 5 ಪಾಕ್ ಪ್ರಜೆಗಳ ಬಂಧನ

ಮುಂಬೈ: ಅರಬ್ಬಿ ಸಮುದ್ರದಲ್ಲಿ ಭಾರತೀಯ ಕರಾವಳಿ ಕಾವಲು ಪಡೆ (ICG) ಹಾಗೂ ಗುಜರಾತ್ ಉಗ್ರ ನಿಗ್ರಹ ದಳ (ATS) ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ₹3,000 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಇರಾನ್ ಮೂಲದ ದೋಣಿಯಲ್ಲಿದ್ದ ಐವರು ಪಾಕಿಸ್ತಾನಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ.

ಸೆ.25ರಂದು ಲಕ್ಷದ್ವೀಪದ ಸಮೀಪ ಈ ಕಾರ್ಯಾಚರಣೆ ನಡೆದಿದ್ದು, ಗುಪ್ತಚರ ಇಲಾಖೆಯಿಂದ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಕೋಸ್ಟ್ ಗಾರ್ಡ್ ಸಿಬ್ಬಂದಿ ಸಮುದ್ರ ಹಾಗೂ ವಾಯು ಮಾರ್ಗದ ಮೂಲಕ ನಿಗಾ ವಹಿಸಿದ್ದರು.

ಈ ವೇಳೆ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ದೋಣಿಯೊಂದನ್ನು ಭದ್ರತಾ ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ಬಳಿಕ ಅದನ್ನು ಬೆನ್ನಟ್ಟಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ಲಕ್ಷದ್ವೀಪದ ಪಶ್ಚಿಮ ಭಾಗದಲ್ಲಿ ದೋಣಿಯನ್ನು ತಡೆದು ತಪಾಸಣೆ ನಡೆಸಿದ್ದಾರೆ.

ತಪಾಸಣೆ ವೇಳೆ ಭಾರಿ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿದ್ದು, ಅವುಗಳಲ್ಲಿ ಹೆಚ್ಚಿನ ಗುಣಮಟ್ಟದ ಮೆಥಾಂಫೆಟಮೈನ್ ಹಾಗೂ ಹೆರಾಯಿನ್ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೋಣಿಯಲ್ಲಿದ್ದ ಐವರು ಪಾಕಿಸ್ತಾನಿ ಪ್ರಜೆಗಳನ್ನೂ ವಶಕ್ಕೆ ಪಡೆಯಲಾಗಿದೆ. ದೋಣಿ, ಆರೋಪಿಗಳು ಹಾಗೂ ಜಪ್ತಿ ಮಾಡಲಾದ ಮಾದಕ ವಸ್ತುಗಳನ್ನು ಶಸ್ತ್ರಸಜ್ಜಿತ ಭದ್ರತೆಯೊಂದಿಗೆ ಮುಂಬೈಗೆ ಕರೆತರಲಾಗಿದೆ.

ಮುಂಬೈನಲ್ಲಿ ಸಂಬಂಧಿತ ಭದ್ರತಾ ಮತ್ತು ತನಿಖಾ ಸಂಸ್ಥೆಗಳು ಜಂಟಿಯಾಗಿ ವಿಚಾರಣೆ ನಡೆಸಲಿದ್ದು, ಮಾದಕ ವಸ್ತುಗಳ ಮೂಲ, ಸಾಗಣೆ ಮಾರ್ಗ ಹಾಗೂ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದ ಸಂಪರ್ಕದ ಬಗ್ಗೆ ತನಿಖೆ ನಡೆಯಲಿದೆ.

ಗುಜರಾತ್ ATS ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಐವರು ಪಾಕಿಸ್ತಾನಿ ಪ್ರಜೆಗಳನ್ನು ವಶಕ್ಕೆ ಪಡೆದಿರುವುದನ್ನು ಖಚಿತಪಡಿಸಿದೆ.

ಸಮುದ್ರ ಮಾರ್ಗದ ಮೂಲಕ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಲು ಭದ್ರತಾ ಸಂಸ್ಥೆಗಳು ಕಣ್ಗಾವಲು ಹೆಚ್ಚಿಸಿರುವ ನಡುವೆಯೇ ಈ ಕಾರ್ಯಾಚರಣೆ ನಡೆದಿದೆ. ಭಾರೀ ಪ್ರಮಾಣದ ಡ್ರಗ್ಸ್ ಜಪ್ತಿಯಾಗಿರುವುದು ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲಗಳಿಗೆ ದೊಡ್ಡ ಹೊಡೆತ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related posts