ಬೆಳಗಾವಿ: ಪ್ರಸ್ತುತ ಕೊರೋನಾ ವಕ್ಕರಿಸಿರುವ ಈ ಸಂಕಷ್ಟ ಕಾಲದಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆ. ಅದರಲ್ಲೂ ಆರೋಗ್ಯ ಕಾರ್ಯಕರ್ತರು ಹಾಗೂ ಪೊಲೀಸರ ಪಾಲಿಗೆ ನಿತ್ಯವೂ ಒಂದೊಂದು ವ್ಯಥೆಯ ಕಥೆ.
‘ಮನೆಯಿಂದ ನೀವು ಹೊರ ಬಂದರೆ ನಾನು ನಿಮ್ಮ ಮನೆಗೆ ಬರುವೆ’ ಎಂಬ ಜಾಗೃತಿ ಕಹಳೆ ಎಲ್ಲೆಲ್ಲೂ ಮೊಳಗುತ್ತಿದೆ. ಆದರೆ ವೈದ್ಯರು, ನರ್ಸುಗಳು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಪ್ರತಿ ನಿತ್ಯವೂ ಆತಂಕದ ಸನ್ನಿವೇಶದ ನಡುವೆಯೂ ಕರ್ತವ್ಯ ನಿರ್ವಹಿಸಬೇಕಿದೆ. ಅಂತಹಾ ಆರೋಗ್ಯ ಸೇವಾ ನಿರತ ಶುಶ್ರೂಶಕಿಯ ಕಥೆಯಿದು.
ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿದ್ದ ನರ್ಸ್ ಸುಗಂಧಾ ಕೊನೆಗೂ ಮಗಳನ್ನು ಓಡಾಡಿ ಬಂದು ತಬ್ಬಿಕೊಂಡ ಒಂದು ಮನಮಿಡಿಯುವ ಸನ್ನಿವೇಶ ಇದೀಗ ಇಡೀ ನಾಡಿನ ಸುದ್ದಿಯ ಕೇಂದ್ರಬಿಂದುವಾಗಿದೆ. ತಾಯಿ-ಮಗಳ ಅಪರೂಪದ ಪ್ರೀತಿಯ ಕ್ಷಣಗಳಿಗೆ ಸಾಕ್ಷಿಯಾದದ್ದು ಕುಂದಾನಗರಿ.
ಕೆಲ ದಿನಗಳ ಹಿಂದಷ್ಟೇ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಿ ಹೊಟೇಲ್ ಕ್ವಾರೆಂಟೆನ್ ನಲ್ಲಿದ್ದ ನರ್ಸ್ ಸುಗಂಧಾ ತನ್ನ ಕರುಳ ಕುಡಿಯನ್ನು ದೂರದಿಂದಲೇ ನೋಡಿ ಖುಷಿಪಡಬೇಕಾಗಿತ್ತು. ಆದರೆ ಬಾಚಿ ತಬ್ಬಿಕೊಳ್ಳಲಾಗದೇ ಕಣ್ಣೀರಿಡುತ್ತಿದ್ದರು. ಈ ವೇದನೆಯ ಸಂಗತಿ ಮಾಧ್ಯಮಗಳಲ್ಲಿ ಸುದ್ದಿ ರೂಪದಲ್ಲಿ ಸದ್ದಾಗುತ್ತಿತ್ತು. ಈ ಸುದ್ದಿಯನ್ನು ಗಮನಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಬಾವುಕರಾಗಿದ್ದರು. ಖುದ್ದು ನರ್ಸ್ ಸುಗಂಧಾ ಅವರಿಗೆ ಕರೆ ಮಾಡಿ ಧೈರ್ಯ ತುಂಬುವ ಕೆಲಸವನ್ನು ಸಿಎಂ ಮಾಡಿದ್ದರು.
ಇದೀಗ 20 ದಿನಗಳ ನಂತರ ಸುನಂದಾ ಅವರು ಮನೆಗೆ ವಾಪಾಸಾಗಿದ್ದಾರೆ. ಹಲವು ದಿನಗಳಿಂದ ಮಗಳ ಮುಖ ನೋಡದೇ ಕಣ್ಣೀರಿಡುತ್ತಿದ್ದ ನರ್ಸ್ 3 ವಾರಗಳ ಬಳಿಕ ಮಗಳು ಐಶ್ವರ್ಯಳನ್ನ ನೋಡಿ ಕಣ್ತುಂಬಿಕೊಂಡರು.
ತ್ಯಾಗಮಯಿ ತಾಯಿಯ ಮನದೊಳಗಿದ್ದ ನೋವುಗಳೆಲ್ಲಾ ಮರೆಯಾದ ಈ ಸನ್ನಿವೇಶ ಕಂಡು ಅಲ್ಲಿದ್ದವರೆಲ್ಲಾ ಪುಳಕಿತರಾದರು. ಅವರೆಲ್ಲರ ಕಣ್ಣಂಚಿನಲ್ಲೂ ಆನಂದ ಬಾಷ್ಪ ಸುರಿಯುತ್ತಿತ್ತು.
ನಮ್ಮ ನಾಳೆಗಾಗಿ ಅವರ ಇಂದನ್ನು ಬಲಿಕೊಡುತ್ತಿರುವ ವೈದ್ಯರು-ನರ್ಸುಗಳೆಲ್ಲರ ಕಥೆಯೂ ಅಷ್ಟೇ.