ಬೆಂಗಳೂರು: ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳ ಚಟುವಟಿಕೆಗಳು ಸ್ತಬ್ಧವಾಗಿದ್ದು ಶಾಲಾ ಕಾಲೇಜುಗಳ ಆರಂಭ ಸದ್ಯಕ್ಕಿಲ್ಲ. ನವೆಂಬರ್ ತಿಂಗಳಲ್ಲಿ ಶಾಲಾ ಕಾಲೇಜು ಆರಂಭವಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿದ್ದು ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಪ್ರಸ್ತುತ ಆನ್’ಲೈನ್ ಶಿಕ್ಷಣ ಮತ್ತು ಶಾಲಾ ಚಟುವಟಿಕೆ ಕುರಿತಂತೆ ಸರ್ಕಾರೇತರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಚಿವ ಎಸ್. ಸುರೇಶ್ ಕುಮಾರ್ ವೆಬಿನಾರ್’ನಲ್ಲಿ ನಡೆಸಿದ ಸಮಾಲೋಚನೆ ಕುತೂಹಲದ ಕೇಂದ್ರಬಿಂದುವಾಯಿತು. ವಿವಿಧ ರೀತಿಯ ಸಲಹೆಗಳು ಕೇಳಿಬಂದವು. ಈ ಸಂದರ್ಭದಲ್ಲಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ ಸಚಿವರು, ಪ್ರಸಕ್ತ ಸನ್ನಿವೇಶದಲ್ಲಿ ಶಾಲೆಗಳನ್ನು ತೆರೆಯುವ ಅವಸರ ಸರ್ಕಾರಕ್ಕಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಅವಸರದಲ್ಲಿ ಶಾಲೆ ತೆರೆಯುವುದಿಲ್ಲ ಎಂದು ಹೇಳಿದರು.
ಮಕ್ಕಳನ್ನು ಕಲಿಕೆಗೆ ನೆರವಾಗಲು ಮನೆಶಾಲೆ, ತಂತ್ರಜ್ಞಾನಾಧಾರಿತ ಶಿಕ್ಷಣ, ಆಕಾಶವಾಣಿ, ದೂರದರ್ಶನ, ಶಿಕ್ಷಣ ಇಲಾಖೆಯ ಚಾನೆಲ್ ಸೇರಿದಂತೆ ಎಲ್ಲ ಅವಕಾಶವನ್ನೂ ಮುಕ್ತವಾಗಿರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.